******..ಬೇಕಾಗಿದ್ದಾರೆ.. ****
ಪಿಯುಸಿ ಪರೀಕ್ಷೆ ಮುಗಿಸಿ ಮೂರು ವರ್ಷದಿಂದ ರಜೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಹೋಟೆಲ್ ನತ್ತ ಹೆಜ್ಜೆ ಹಾಕಿದ್ದೆ,
ಮುಂದೆ ಓದು ನಿಲ್ಲಿಸೋದ?, ಡಿಗ್ರಿ ಹೋಗೋದಾ?, ಪಾಲಿಟೆಕ್ನಿಕ್ ಕೋರ್ಸ್'ನತ್ತ ತಲೆ ಹಾಕೋದ? ಎನ್ನುವ ಯೋಚನೆ. ಪಿಯುಸಿ ಆದ ಮೇಲೆ ಇಲ್ಲೇ ಇಕ್ಕಟ್ಟು ಆಗೋದು ನೋಡಿ.
ಏನೇ ಆಗಲಿ ಮೊದಲು ರಿಸಲ್ಟ್ ಬರಲಿ ಆಮೇಲೆ ನೋಡೋಣ ಎಂದು ಹೋಟೆಲ್ನ ಕೆಲಸದೊಳಗೆ ಮುಳುಗಿಹೋದೆ. ಪ್ರತಿವರ್ಷ ನಾನು ಹಾಗೂ ನೀತಿನ್ ಬೇಸಿಗೆ ಹಾಗೂ ದಸರಾ ರಜೆಗೆ ಹೋಟೆಲ್'ಗೆ ಖಾಯಂ ಕೆಲಸಗಾರರು. ನಮ್ಮನ್ನು ಕೆಲಸ ಮಾಡಿಸಿಕೊಳ್ಳುವ ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ತಾ ಇದ್ದುದ್ದರಿಂದ ಹೋಟೆಲ್, ಹಾಗೂ ಅಲ್ಲಿನ ಕೆಲಸಗಾರರು ತುಂಬಾ ಆಪ್ತವಾಗಿದ್ದರು. ಆದ್ದರಿಂದ ಬೇರೆ ಕಡೆ ಕೆಲಸ ಹುಡುಕುವ ಯೋಚನೆ ಮಾಡಲು ಕೂಡ ಹೋಗಿರಲಿಲ್ಲ.
ಪಿಯುಸಿ ಬರುವ ಹೊತ್ತಿಗೆ ಕ್ಲಿನರ್, ಪಾತ್ರ ತೊಳೆಯುವುದು, ತರಕಾರಿ ಕಟ್ ಮಾಡುವುದರಿಂದ ಹಿಡಿದು ದೋಸೆ ಹಾಕುವವರೆಗೆ ಕಲಿತಿದ್ದೆ. ಇನ್ನೊಂದು ವರ್ಷ ಅಲ್ಲೇ ಇರುತ್ತಿದ್ದರೆ ಒಂದಷ್ಟು ಅಡುಗೆ ಮಾಡೋದು ಕೂಡ ಕಲಿಯುತ್ತಿದ್ದೆ. ಅಂತೂ ಮೇ ನಲ್ಲಿ Result ಬಂತು First ಕ್ಲಾಸ್ ನಲ್ಲಿ ಪಾಸ್ ಕೂಡ ಆಗಿದ್ದೆ. ಯಾವ ದಾರಿ ಹಿಡಿಯೋದು ಎಂದು ಮಾತ್ರ ಗೊತ್ತಾಗಲಿಲ್ಲ. ನನಗೆ ಡಿಗ್ರಿ ಹೋಗಬೇಕು ಅನಿಸಿದ್ರೆ. ಮನೆಯಲ್ಲಿ ಯಾವುದರು ಪಾಲಿಟೆಕ್ನಿಕ್ ಮಾಡು ಎಂಬ ಬುದ್ಧಿವಾದ. ಆದರೆ ಊರಲ್ಲಿಯೇ ಒಂದಷ್ಟು ಜನ iti ಡಿಪ್ಲೊಮಾ ಮಾಡಿದವರ ಸ್ಥಿತಿ ನೋಡಿದಾಗ ಪಾಪ ಅನಿಸುತ್ತಿತ್ತು. ಮುಂದಿನ ದಿನಗಳ ಬಗ್ಗೆ ಯೋಚಿಸಿದಾಗ, ಹೋಟೆಲ್ನ ದಿನ ಸಂಬಳ ಯಾವುದಕ್ಕೂ ಸಾಲೊದಿಲ್ಲ ಇಲ್ಲೇ ಇದ್ರೆ ನಿಂತ ನೀರಾಗ್ಬಿಡ್ತೇನೆ, ಇಲ್ಲಿಗೊಂದು ಪೂರ್ಣ ವಿರಾಮ ಇಡಲೇಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೆ. ನಮ್ಮ ಹುಡುಗರಿಗೆ ಯಾವುದಾದರೂ ಒಂದು ಕೆಲಸ ಇದ್ದರೆ ತಿಳಿಸಿ ಮರ್ರೆ ಎಂದಿದ್ದೆ.
ಒಂದಷ್ಟು ದಿನದ ನಂತರ ಹೈಸ್ಕೂಲ್ ಸಹಪಾಠಿ ಸಂದೀಪ್ ಕರೆ ಮಾಡಿ, ಬೆಂಗಳೂರಿನಲ್ಲಿ ಕೆಲಸ ಇದೆಯಂತೆ ನಮ್ಮ ಅವಿನಾಶ್ ನೋಡಿಕೊಂಡು ಬಂದಿದ್ದಾನೆ. ಪಿಯುಸಿ ಕ್ವಾಲಿಫಿಕೇಶನ್ ಮೇಲೆ, 12000 ಸಂಬಳ ಅಂತೆ ರೂಮ್, ಊಟ ಅವರದೇ ಅಂತೆ. ಎಲ್ಲ ಮಾತುಗಳನ್ನು ಅಂತೆಯಲ್ಲಿಯೇ ಮುಗಿಸಿದ್ದ!. ದಿನಕ್ಕೆ 200ರೂ. ದುಡಿಯುತ್ತಿದ್ದವನಿಗೆ ಅದರ ಡಬ್ಬಲ್ ಸಿಗುತ್ತೆ ಅಂದ್ರೆ. ಒಂದು ಕ್ಷಣಕ್ಕೆ ಸ್ವರ್ಗದಲ್ಲಿ ತೇಲಾಡಿದಂತಾಯ್ತು. ಅವಿನಾಶ್'ನಿಗೆ ಕರೆಮಾಡಿ ಮಾತಾಡಿ ಕೊನೆಗೆ ಮೂವರು ಹೋಗುವುದೆಂದು ತೀರ್ಮಾಣವಾಯಿತು. ಜೊತೆಗೆ ಒಂದು ಮೊಬೈಲ್ ನಂಬರ್ ಕೊಟ್ಟು ಈ ನಂಬರ್'ಗೆ ಕರೆಮಾಡಿ ಜಾಬ್ confirm ಮಾಡಿಕೋ ಎಂದು ಹೇಳಿದ. ನಾನು ಆ ನಂಬರ್ ಗೆ ಒಂದೇ ಸಲ ಕರೆಮಾಡಿ ಮಾತಾಡಿದ್ದಷ್ಟೇ, ಆ ಕಡೆಯಿಂದ female voice ನೊಂದಿಗೆ ಎರಡು ದಿನಕೊಮ್ಮೆ ಕರೆ ಬರಲು ಶುರುವಾಯಿತು. ಯಾವಾಗ ಜಾಬ್ ಗೆ join ಆಗುತ್ತಿರಾ ಸರ್. Workersನ ಅವಶ್ಯಕತೆ ತುಂಬಾ ಇದೆ. ಬರೀ 3ತಿಂಗಳು ಟ್ರೈನಿಂಗ್ ಅಷ್ಟೇ ಈ ಕಾಲ್ ಗಳನ್ನು ನೋಡಿದಾಗ ಎಲ್ಲೋ ಒಂದು ಕಡೆ ದಾರಿ ತಪ್ಪಿದೇವೋ ಎಂದು ಸಣ್ಣದಾಗಿ ಅನುಮಾನ ಬಂದಿತ್ತು. ಆದ್ರೂ ಅವಿನಾಶ್ ನೋಡಿಕೊಂಡು ಬಂದಿದ್ದಾನಲ್ಲ, ಮತ್ಯಾಕೆ ಚಿಂತೆ ಮಾಡೋದು, ಎಂದು ಮನೆಯಲ್ಲಿ ಮೆಲ್ಲಗೆ ಅನುಮತಿಗೆ ಕೋರಿದ್ದೆ. ಭಾರಿ ಕಷ್ಟದಲ್ಲಿ ಮನೆಯಿಂದ ಅನುಮತಿ ಸಿಕ್ಕಿತು.
ಅಂತೂ ಧರ್ಮಸ್ಥಳದಿಂದ ಬೆಂಗಳೂರಿನತ್ತ ಬಸ್ಸಿಡಿದು ಹೊರಟೆವು. ಕೊನೆಯಲ್ಲಿ ಪಿಯುಸಿಯ ಕರುಣಾಕರ ಕೂಡ ನಮ್ಮ ಜೊತೆ ಸೇರಿಕೊಂಡ. ಪ್ರತಿ ಸಲ ಕೆಂಪು ಬಸ್ಸಿನಲ್ಲೇ ಹೋಗುತ್ತಿದ್ದ ನಾನು. ಮೊದಲ ಬಾರಿಗೆ ಅವಿನಾಶ್ ನ ಒತ್ತಾಯಕ್ಕೆ ರಾಜಹಂಸ ಹತ್ತಿದೆವು. ನಾಲ್ವರು ಕೂಡ ಉದ್ಯೋಗ ಆಕಾಂಕ್ಷೆಗಳನ್ನು ಹೊತ್ತುಕೊಂಡು ಬೆಳಗ್ಗೆ 6 ಗಂಟೆಯೊತ್ತಿಗೆ ಬೆಂಗಳೂರಿನ ಮಜೆಸ್ಟಿಕ್ ಮಣ್ಣಿಗೆ sorry ಕಾಂಕ್ರೀಟ್ ರೋಡ್ ಗೆ ಪಾದಸ್ಪರ್ಶ ಮಾಡಿದೆವು. ಬಸ್ಸಿನಿಂದ ಇಳಿದು ಸಾಗರದಂತಿದ್ದ ಬಸ್ಸಿನ ಸಾಲುಗಳತ್ತಾ ಕಣ್ಣಾಯಿಸಿ. ಬರೀ ಬಸ್ಟ್ಯಾಂಡೆ ಇಷ್ಟು ದೊಡ್ಡದಾ!? ಎಂದು ಕೊಳ್ಳುತ್ತಾ. ಅಲ್ಲಿಂದ ಮುಖ ತೊಳೆದುಕೊಂಡು ಅದ್ಯಾವುದೋ ಒಂದು ಹೋಟೆಲ್ ಗೆ ನುಗ್ಗಿದೆವು.
ತಿಂದು ತೇಗಿ ಬಿಲ್ ನೋಡಿದ ಮೇಲೆನೆ ಗೊತ್ತಾಗಿದ್ದು ಹೋಟೆಲ್ ಸ್ವಲ್ಪ ಗಟ್ಟಿದ್ದು ಎಂದು. ಮೊದಲಬಾರಿಗೆ 19 ರೂಪಾಯಿಯ ಚಾ ಕುಡಿದಿದ್ದು ಹೆಮ್ಮೆ ಅಂತ ಹೇಳಿಕೊಳ್ಳಬೇಕಾ ಗೊತ್ತಾಗಲಿಲ್ಲ.
ತಂದಿದ್ದ 5000 ಸಾವಿರ ರೂ. ಮೆಲ್ಲಗೆ ಕರಗತೊಡಗಿತ್ತು. ಅಲ್ಲಿಂದ ಸೀದಾ ಕಂಪೆನಿಯವರು ಹೇಳಿದಂತೆ ಮಲ್ಲೇಶ್ವರಂ ಬಳಿ ಇಳಿದೆವು. ಅಲ್ಲಿಂದ ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದೆ ಅವಿನಾಶ್ ನೀನು ಇದಕ್ಕಿಂತ ಮುಂಚೆ ಬಂದಿದ್ಯಲ್ಲ ನಿನಗೆ ಗೊತ್ತಿದೆಯಲ್ವಾ? ಎಂದು ಕೇಳಿದಾಗ, ಏನು ಮಾತನಾಡಲಿಲ್ಲ.
actually ಈ ಮಂಗ ಇಲ್ಲಿಗೆ ಬಂದೆ ಇರಲಿಲ್ಲ. ನಾವು ಕೂಡ ಇವನ ಜೊತೆ ಬರ್ಲಿ ಅಂತ ನಮಿಗೆಲ್ಲ ಸುಳ್ಳು ಹೇಳಿದ್ದ. ಅವಾಗ್ಲೇ ಗೊತ್ತಾಗಿದ್ದು, ನಾವು ಇಲ್ಲಿವರೆಗೆ "ಬೇಕಾಗಿದ್ದಾರೆ" ಜಾಹಿರಾತು ಮೂಲಕ ಬಂದಿದ್ದು ಎಂದು...
ಮುಂದುವರಿಯುತ್ತೆ...
Comments
Post a Comment