ಹೈಸ್ಕೂಲಿನಲ್ಲಿ ಇರುವಾಗ ಶುರುವಾದ ಸೈಕಲ್ ಸವಾರಿಯ ಹುಚ್ಚು ಈಗಲೂ ಕೂಡ ಕಡಿಮೆಯಾಗಲೇ ಇಲ್ಲ. ಯಾವಾಗ ನಮಗೆ ಸುಸ್ತಾಗುವುದು ಕೂಡ ಒಂದು ನಶೆಯಂತೆ ಅನುಭವಕ್ಕೆ ಬರುತ್ತದೋ,! ಅದೊಂಥರಾ ಮಜಾನೆ ಬೇರೆ. ದೇಹ ದಣಿದು pain relief ಆಗುವಾಗ ಅದು ಇನ್ನೊಂದು ಥರ ಅನುಭವ, ದೇಹ ದಣಿದು ಬೆವರು ಸುರಿದ ನಂತರ ತಂಗಾಳಿಗೆ ಮೊಗವನ್ನೊಡ್ಡಿದಾಗ ಸಿಗುವ ಖುಷಿನೆ ಬೇರೆ. ಇದನ್ನೆಲ್ಲ ಅನುಭವಿಸಬೇಕಾದರೆ 40 ಕಿಲೋಮೀಟರ್ ಮೇಲ್ಪಟ್ಟ ಸೈಕಲ್ ಸವಾರಿ ಮಾಡಬೇಕು. ಈಗ ವಿಷಯಕ್ಕೆ ಬರೋಣ. ಹಾಸನದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದೆ, ಕೆಲವು ಅನಿವಾರ್ಯ ಕಾರಣಗಳಿಂದ ಹಾಸನವನ್ನು ಬಿಡಬೇಕಾಗಿ ಬಂತು. ಆಗ ನನ್ನ ಜೊತೆ ಬೇಲೂರು, ಹಳೇಬೀಡು, ಗೊರೂರು ಹಾಗೂ ಹಾಸನದ ಗಲ್ಲಿ ಗಲ್ಲಿನು ಸುತ್ತಿದ್ದ ಸೈಕಲ್'ನ್ನು ಮಾರಿ ಹೋಗೋದಾ? ಅಥವಾ ಮನೆಗೆ ಸೈಕಲ್'ನಲ್ಲೇ ಹೋಗೋದಾ? ಎಂದು ಯೋಚಿಸ್ತಾ ಇದ್ದೆ. ಅವಾಗ್ಲೇ ಅಮ್ಮನಿಗೆ ಫೋನ್ ಮಾಡಿ "ಅಮ್ಮ ಯಾನ್ ಸೈಕಲ್'ಡು ಇಲ್ಲಾಗ್ ಬರೊಡ" (ಅಮ್ಮ ನಾನು ಸೈಕಲ್'ನಲ್ಲಿ ಊರಿಗೆ ಬರ್ಬೇಕಾ) ಎಂದು ಕೇಳಿದೆ ತಡ, ಒಂದಷ್ಟು ಬೈಗುಳದ ಜೊತೆಗೆ ಬುದ್ದಿವಾದದ ಮಿಶ್ರಿತ ಮಾತುಗಳು ಅಮ್ಮನ ಬಾಯಿಂದ ಉದುರಿ, ನನ್ನ ಕಿವಿಯೊಳಗೆ ನೊಣ ನುಸುಳಿದಂತಾಯಿತು. ಅಮ್ಮನ ಇಂತಹ ಮಾತುಗಳಿಗೆ ಕಾರಣಗಳು ಕೂಡ ಇತ್ತು. ಒಂದು ವಾರದ ಹಿಂದೆ ಸುರಿದ ಭಾರಿ ಮಳೆಗೆ ಚಾರ್ಮಾಡಿ ಘಾಟ್'ನಲ್ಲಿ ಎರಡು ಬಾರಿ ಭೂ ಕುಸಿತ ಉಂಟಾಗಿತ್ತು....