ತಡಿಯಂಡಮೊಳ್ ಚಾರಣ ಭಾಗ -2,
ನಾಲ್ನಾಡು ಅರಮನೆ.
ಅಂದಾ ಹಾಗೆ, ಈ ನಾಲ್ನಾಡು ಅರಮನೆಯ ನಿರ್ಮಾಣದ ಕುರಿತು ಇತಿಹಾಸವನ್ನು ಹುಡುಕುತ್ತ ಹೋದರೆ, ದೊಡ್ಡವೀರ ರಾಜೇಂದ್ರರು ಶತ್ರುಗಳಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ಸೂಕ್ತ ಸ್ಥಳವನ್ನು ಹುಡುಕುತ್ತ ಬಂದಾಗ ಅವರ ಕಣ್ಣಿಗೆ ಬಿದ್ದಿದ್ದು ಈ ಬೆಟ್ಟ ಶ್ರೇಣಿಗಳಿಂದ ಹಾಗೂ ದಟ್ಟವಾದ ಕಾನನದಿಂದ ಸುತ್ತುವರೆದ ಯುವಕಪಾಡಿ ಗ್ರಾಮದಲ್ಲಿರುವ ಈ ಪ್ರದೇಶ.
ಈ ಸ್ಥಳದಲ್ಲಿ 1792ರಲ್ಲಿ ಎರಡು ಅಂತಸ್ತಿನ ಸಣ್ಣ ಅರಮನೆಯನ್ನು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತೆ.
ಅರಮನೆಯನ್ನು ನೋಡಿಕೊಳ್ಳುವವರು, ನಮ್ಮ ಊರಿನ ಬಗ್ಗೆ ಹಾಗೂ ನಮ್ಮ ಪರಿಚಯ ಮಾಡಿಕೊಳ್ಳುತ್ತಾ, ಅರಮನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅರಮನೆಯೊಳಗೆ ಹೆಜ್ಜೆ ಹಾಕಿದರು. ನಾವು ಅವರನ್ನು ಹಿಂಬಾಲಿಸುತ್ತಾ ಮುಖ್ಯ ದ್ವಾರವನ್ನು ದಾಟಿ ಅರಮನೆಯೊಳಗೆ ಹೋದಾಗ ಬಲ ಬದಿಯಲ್ಲಿ ಒಂದು ಮಂಟಪವಿದೆ.
ಇವರು ಹೇಳುವ ಪ್ರಕಾರ ಇದು ದೊಡ್ಡವೀರ ರಾಜೇಂದ್ರರ ತಂಗಿಯ ವಿವಾಹ ಮಂಟಪವೆಂದು ಹೇಳಿದರು. ಆದರೆ ನಾನು ಗೂಗಲ್ನಲ್ಲಿ ಜಾಲಾಡಿದಾಗ ದೊಡ್ಡವೀರ ರಾಜೇಂದ್ರರ ಮದುವೆ ಮಂಟಪವೆಂದು ತಿಳಿದು ಬರುತ್ತದೆ. ಈ ಮಂಟಪಕ್ಕೆ ನಾಲ್ಕು ಪ್ರವೇಶ ದ್ವಾರಗಳಿದ್ದು ಮೇಲ್ಬಾಗದಲ್ಲಿ ನಾಲ್ಕು ದಿಕ್ಕಿಗೂ ಬಸವನ ಮೂರ್ತಿಯಿದೆ.
ಈ ಅರಮನೆ ಎರಡು ಅಂತಸ್ತುಗಳನ್ನು ಹೊಂದಿದ್ದು, ಮೇಲಿನ ಅಂತಸ್ತಿನಲ್ಲಿ ಚಿಕ್ಕ ಹಾಗು ಚೊಕ್ಕದಾದ ರಾಜನ ದರ್ಬಾರ್ ಹಾಲ್ ಹೊಂದಿದ್ದು, ಮೇಲ್ಚಾವಣಿಯ ತುಂಬಾ ವರ್ಣ ಚಿತ್ರಗಳಿಂದ ತುಂಬಿದ್ದು,
ಎರಡು ಶತಮಾನ ಕಳೆದರು ಬಣ್ಣ ಮಾಸದೆ ಇನ್ನು ಕೂಡ ಅದೇ ಹೊಳಪಿನಿಂದ ಕಂಗೊಳಿಸುತ್ತಿರುವುದು ಆಗಿನ ಕಲೆಯ ಶ್ರೀಮಂತಿಕೆ. ಪುರಾತತ್ವ ಇಲಾಖೆಗೆ ಒಳಪಡುವ ಮುನ್ನ ಸಿನಿಮಾ ಚಿತ್ರೀಕರಣಕ್ಕೆಂದು ಬಂದವರು ಅವರಿಗೆ ಇಷ್ಟ ಬಂದ ಹಾಗೆ ಪೈಂಟ್ ಬಳಿದು ಅವರ ಚಿತ್ರೀಕರಣಕ್ಕೆ ಬೇಕಾಗುವ ಹಾಗೆ ಚಿತ್ರಗಳನ್ನು ಬಿಡಿಸಿ, ಕೆಲವೊಂದಿಷ್ಟು ಮೂಲ ಚಿತ್ರಕಲೆಗಳನ್ನೇ ಅಳಿಸಿ ಹಾಕಿದ್ದುದ್ದರ ಕುರುಹು ಕಾಣಿಸುತ್ತಿತ್ತು.
ಆಗೇನೆ ಮೇಲಿನ ಅಂತಸ್ತಿನ ಬದಿಯಲ್ಲಿಂದ ಎಂಟು ಮೆಟ್ಟಿಲುಗಳನ್ನು ಇಳಿದು ಹೋದರೆ ಅಲ್ಲೊಂದು ಕತ್ತಲ ಕೋಣೆ ಇದೆ. ಇದು ವೈರಿಗಳಿಂದ ತಪ್ಪಿಸಿಕೊಳ್ಳಲು ಇರುವ ಕತ್ತಲ ಕೋಣೆಯಂತೆ.
ಹಾಗೇನೇ ಮುಂದೆ ಹೋದರೆ, ಸಣ್ಣ ಕಿಂಡಿಯೊಂದಿದೆ ಅದರಲ್ಲಿ 24 ರಂಧ್ರಗಳಿದ್ದು, ಅಲ್ಲಿಂದ ನೇರವಾಗಿ ಮುಖ್ಯ ದ್ವಾರವನ್ನು ಕಾಣಬಹುದು, ಜೊತೆಗೆ ಈ ಕಿಂಡಿಯ ವಿಶೇಷ ಏನೆಂದರೆ, ಮುಖ್ಯ ದ್ವಾರದಿಂದ ವೈರಿಗಳೇನಾದರು ಧಾವಿಸಿದರೆ, ಈ 24 ರಂಧ್ರಗಳಲ್ಲಿ ಯಾವುದೇ ರಂಧ್ರದಿಂದ ಬೇಕಾದರೂ ಕೋವಿಯಿಂದ ಫೈರ್ ಮಾಡಿದರೆ ಬುಲೆಟ್ ನೇರವಾಗಿ ಎದೆಗೆ ನುಗ್ಗಬಹುದಂತಹ ತಂತ್ರಗಾರಿಗೆ ಆ ಕಿಂಡಿಯದ್,
ಅಲ್ಲಿಂದ ನೇರವಾಗಿ ಹೊರಬಂದರೆ ಜಗಳಿಗೆ ತಲುಪುತ್ತೆ. ನಾವು ಅಲ್ಲೇ ಒಂದಷ್ಟು ಪಟಗಳನ್ನು ಕ್ಲಿಕ್ ಮಾಡಿ,
ತಡಿಯಂಡಮೊಳ್ ಬೆಟ್ಟದ ದೂರದ ಬಗ್ಗೆ ಅವರಲ್ಲಿ ವಿಚಾರಿಸಿಕೊಂಡು, ನಾಲ್ನಾಡು ಅರಮನೆಯ ಪಕ್ಕದಲ್ಲೇ ಇರುವ ಯುವಕಪಾಡಿ ಕಿರಿಯ ಪ್ರಾಥಮಿಕ ಶಾಲೆಯ ಮೈದಾನದ ಮೂಲಕ ಹಾದು ತಡಿಯಂಡಮೊಳ್ ಬೆಟ್ಟದ ದಾರಿ ಹಿಡಿದೆವು. ನಾಲ್ನಾಡು ಅರಮನೆಯಿಂದ ತಡಿಯಂಡಮೊಳ್ ಬೆಟ್ಟಕ್ಕೆ ಸುಮಾರು 5.5 ಕಿಮೀ ಅಂತರವಿದೆ. ಪ್ರದೀಪ್'ರವರು ಉದ್ಯೋಗ ಹುಡುಕುತ್ತಿರುವುದರ ಬಗ್ಗೆ ಮಾತನಾಡುತ್ತ ಏರುರಸ್ತೆಯಯಲ್ಲಿ ಹೆಜ್ಜೆ ಹಾಕುತ್ತಾ, ಜೊತೆಗೆ ನಮ್ಮ ಮಹೇಶ್'ರವರ ರೋದ್ನೆಗೆ, ನಾನು ಪ್ರದೀಪ್ ಒಂದಷ್ಟು ಮಾತಿನಲ್ಲೇ ಬುಸ್ಟ್ ತುಂಬಿಸಿ "ಇಷ್ಟು ಚಂದದ ರಸ್ತೆಯಲ್ಲಿಯೇ ನಡೆಯಲು ಸಾಧ್ಯವಾಗಲಿಲ್ಲ ಅಂದ್ರೆ ನಮ್ಮ ಗ್ರೂಪ್'ನ ಸದಸ್ಯರಗುವುಕ್ಕೆ ನೀವು ಅನರ್ಹ" ಎಂದು ತಮಾಷೆ ಮಾಡಿದೆವು. ದಣಿದಿದ್ದ ದೇಹಕ್ಕೆ ಅಲ್ಲಲ್ಲಿ ಹೋಮ್'ಸ್ಟೆಗಳು ಹಾಗೂ ಅದರ ಜಾಹೀರಾತುಗಳು ಕಣ್ಣಿಗೆ ಬಿದ್ದು ಆಸೆ ಹುಟ್ಟಿಸಿದರು ಕೂಡ ಜೇಬು ತುಂಬಾ ಹಗುರವಾದ್ದರಿಂದ ಜಾಹೀರಾತುಗಳನ್ನು ಓದದೇ ಮುಂದೆ ಸಾಗುವುದೊಂದೆ ನಮ್ಮ ದಾರಿಯಾಗಿತ್ತು.
ಕೆಲವೊಂದು ಕಡೆ ಕಾಫಿ ತೋಟವನ್ನು ಇಬ್ಬಾಗ ಮಾಡಿಕೊಂಡು ಸಾಗಿರುವ ರಸ್ತೆ, ಮುಂದೆ ಸಾಗಿದಂತೆ ಅಲ್ಲಲ್ಲಿ ನೀರಿನ ಸಣ್ಣ ತೊರೆಗಳು, freezer ನಲ್ಲಿ ಇಟ್ಟಿರುವ ನೀರಿನಷ್ಟೇ ತಂಪು,
ಈ ಬಿಸಿಲಿನ ದಗೆಯಲ್ಲೂ ಸುಮಾರು 12ರಿಂದ 18 ಸೆಲ್ಸಿಯಸ್'ನಷ್ಟು ತಂಪಾಗಿತ್ತು. ಹಾಗೇನೇ ರಸ್ತೆಯುದ್ದಕ್ಕೂ ಚಪ್ಪರ ಹಾಕಿದಂತಿರುವ ರಸ್ತೆಯ ಇಬ್ಬದಿಯಲ್ಲಿಯು ಬೃಹತ್ ಮರಗಳು, ಹಾಗೂ ಇತ್ತೀಚಿಗೆ ಆನೆಗಳು ಬಂದು ರುಜು ಹಾಕಿದಂತೆ ಗೇಟನ್ನು ಮುರಿದು ಹಾಕಿರುವ ದೃಶ್ಯಗಳು ಕಾಣಿಸಿದವು.
ಒಂದೆರಡು ಸಣ್ಣ ತೊರೆಗಳನ್ನು ದಾಟಿ ಮುಂದೆ ಸಾಗಿದಾಗ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಕಾಣಿಸಿತು. ಇಲ್ಲಿಂದ ಮುಂದಕ್ಕೆ ಚಾರಣ ಪ್ರಾರಂಭಿಸಬೇಕಾದರೆ ಟಿಕೆಟ್ ಪಡೆದುಕೊಂಡು ಹೋಗಬೇಕು. ಇಲ್ಲಿಂದ ಮುಂದಕ್ಕೆ ಒಂದೇ ಬ್ಯಾಗನ್ನು ತೆಗೆದುಕೊಂಡು ಹೋಗೋಣವೆಂದು ನಿರ್ಧರಿಸಿದೆವು. ಅಂತೆಯೇ ಬಿಸ್ಕೆಟ್, ನೀರು ಹಾಗೂ ರೈನ್ ಕೋಟ್, ಛತ್ರಿಗಳನ್ನು ಒಂದು ಬ್ಯಾಗ್'ಗೆ ತುಂಬಿಸಿಕೊಂಡು, ನಾಲ್ವರಿಗೆ ಒಟ್ಟು 200ರೂ. ಟಿಕೆಟ್ ಮಾಡಿಕೊಂಡು,
ಅರಣ್ಯ ಸಿಬ್ಬಂದಿಗಳ ಒಂದಷ್ಟು ನಿಯಮ ಹಾಗೂ ಇತ್ತೀಚಿಗೆ ಆನೆಗಳ ಓಡಾಟ ಹೆಚ್ಚಾಗಿದ್ದುದರಿಂದ 3ಗಂಟೆಯ ಒಳಗೆ ಬರಲು ಸೂಚಿಸಿದರು, ಅವರ ಎಚ್ಚರಿಕೆಯ ಮಾತುಗಳನ್ನು ಆಳಿಸಿಕೊಂಡು ಬೆಟ್ಟದತ್ತ ವೇಗವಾಗಿ ಹೆಜ್ಜೆ ಹಾಕಿದೆವು.
ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಿಂದ ತಡಿಯಂಡಮೊಳ್ ಬೆಟ್ಟಕ್ಕೆ ಸುಮಾರು 3.ಕಿಮೀ. ನ ಅಂತರ.
ತಡಿಯಂಡಮೊಳ್ ಬೆಟ್ಟ ಮೊದಲ ಬಾರಿ ಚಾರಣ ಮಾಡುವವರಿಗೆ ಹೇಳಿ ಮಾಡಿಸಿದ ಜಾಗ.
ಯಾಕೆಂದರೆ ಚಾರಣದ ಮುಕ್ಕಾಲು ಭಾಗ ರಸ್ತೆಯಲ್ಲಿಯೇ ನಡೆಯಲಿಕ್ಕೆ ಇರೋದರಿಂದ ದಾರಿ ಅಷ್ಟೊಂದು ಕಠಿಣವೆನಿಸೋದಿಲ್ಲ. ಹಾಗಂತ ತುಂಬಾ ಸುಲಭವೇನಲ್ಲ. ಕೊಡವ ಭಾಷೆಯಲ್ಲಿ ತಡಿಯಂಡಮೊಳ್ ಅಂದರೆ ಎತ್ತರವಾದ ಬೆಟ್ಟ ಎಂಬ ಅರ್ಥವಂತೆ. ತಡಿಯಂಡಮೊಳ್ ಬೆಟ್ಟ ಕರ್ನಾಟಕದ ಎತ್ತರದ ಶಿಖರಗಳಲ್ಲೊಂದು, ಸಮುದ್ರ ಮಟ್ಟದಿಂದ ಸುಮಾರು 1748 ಅಡಿ ಎತ್ತರವಿದ್ದು, ಕರ್ನಾಟಕ ಹಾಗೂ ಕೇರಳದ ಗಡಿ ಭಾಗದಲ್ಲಿದೆ. ಬೆಟ್ಟದ ಮೇಲೆ ಹುಲ್ಲುಗಾವಲು ಇದ್ದು, ಬೆಟ್ಟದ ಸುತ್ತ ಶೋಲ ಕಾಡುವಿದೆ.
ತಡಿಯಂಡಮೊಳ್ ನಿಜವಾದ ಚಾರಣದ ಹಾದಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್'ನಿಂದಲೇ ಪ್ರಾರಂಭವಾಗೋದು. ಮೊದಲ ಒಂದು ಕಿಮೀ.ನ ಹಾದಿ ತುಂಬಾ ಸುಲಭವಿದ್ದು,
ದಾರಿಯನ್ನು ಕ್ರಮಿಸುತ್ತ ಹೋದಂತೆ ದಾರಿಯ ಕಠಿಣತೆ ಜಾಸ್ತಿಯಾಗುತ್ತ ಹೋಗುತ್ತದೆ. ಪ್ರದೀಪ್'ರವರು "ಛತ್ರಿ ತಂದಿದಕ್ಕಾದರು, ಒಂದು ಮಳೆಯಾದರು ಬರಬಾರದೆ" ಎಂದು ಬೇಡಿಕೊಳ್ತಾ ಇದ್ದರು. ಜೊತೆಗೆ ಬಿಸಿಲಿಗೆ ದೇಹದ ಬಿಸಿ ಏರಿತ್ತು.
ಮೊದಲು ಸಿಗುವ ಬೆಟ್ಟವನ್ನು ಏರಿ ಶೋಲಾ ಕಾಡಿನೋಳಗೆ ನುಸುಳಿಕೊಂಡು ಹೋದೆವು. ಹಾಗೊಮ್ಮೆ ಈಗೊಮ್ಮೆ ಮೋಡ ಕವಿದರು, ಮಳೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿರಲಿಲ್ಲ. ಬೀಸುವ ಗಾಳಿಯ ಜೊತೆಯಲ್ಲಿ ಸಾಗಿ ಬರುವ ಮಂಜು ನಮ್ಮನ್ನು ಒಂದಷ್ಟು ಹೊತ್ತು ಕಾಣದಂತೆ ಮಾಡಿದರೆ. ಮತ್ತೊಂದು ಕ್ಷಣದಲ್ಲಿ ನಾಟಕದ ರಂಗಮಂದಿರದಲ್ಲಿ ಪರದೆಯನ್ನು ಎಳೆದಂತೆ ಶುಭ್ರವಾಗಿಸಿ ಕಣ್ಣಿಗೆ ಬೆಟ್ಟ ಶ್ರೇಣಿಗಳ ಸಾಲನ್ನು ತೋರಿಸಿ ಕಣ್ಣಿಗೆ ಹಬ್ಬದೂಟವನ್ನು ಉಣಬಡಿಸುತ್ತಿತ್ತು.
ನಾವು ಮೂವರು ಮಾತನಾಡುತ್ತ ಹೆಜ್ಜೆ ಹಾಕುತ್ತಿದ್ದಾರೆ, ಹರಿಪ್ರಸಾದ್ ಮಾತ್ರ ನಮಗೆಲ್ಲರಿಗಿಂತ ಮುಂದೆ ಸಾಗಿದ್ದ. ತಡಿಯಂಡಮೊಳ್ ಚಾರಣದ ಹಾದಿಯಲ್ಲಿ ನನ್ನನ್ನು ತುಂಬಾ ಆಕರ್ಷಿಸಿದ್ದು, ಹುಲ್ಲುಗಾವಲಿಗೆ ಹಾಗೂ ಶೋಲಾ ಅರಣ್ಯಕ್ಕೆ ಗಡಿ ಹಾಕಿದಂತಿರುವ ಗಿಡ.
ಹಾಗೂ ಹುಲ್ಲುಗಾವಲಿನ ಹೂವುಗಳು. ಅದೆಷ್ಟು ಬಗೆಯ ತರತರ ಬಣ್ಣದ ಹೂವುಗಳು ಕಣ್ಣಿಗೆ ಒಂದು ಕ್ಷಣಕ್ಕೆ ಹಬ್ಬವನ್ನೇ ಸೃಷ್ಟಿಸಿತು.
ಹರಿಪ್ರಸಾದ್ ನಮಗೆಲ್ಲರಿಗಿಂತ ಮೊದಲು ತಡಿಯಂಡಮೊಳ್ ತುತ್ತ ತುದಿಗೆ ತಲುಪಿ, ಕಲ್ಲಿನಲ್ಲಿ ಕುಳಿತುಕೊಂಡು ಸಾಲು ಸಾಲು ಬೆಟ್ಟದತ್ತ ದೃಷ್ಟಿಯನ್ನು ನೆಟ್ಟಿದ್ದ. ನಾವು ಮದ್ಯಾಹ್ನ 12:30ಕ್ಕೆ ತಡಿಯಂಡಮೊಳ್ ಬೆಟ್ಟದ ತುದಿಗೆ ತಲುಪಿದೆವು.
ಅಲ್ಲೇ ಒಂದಷ್ಟು ಹೊತ್ತು ಸಾಲು ಸಾಲು ಬೆಟ್ಟಗಳನ್ನು ದಿಟ್ಟಿಸಿ ನೋಡುತ್ತಾ, ಇದೇಗೆ ಉದ್ಭವವಾದವೋ? ಅದೇಗೆ ವರ್ಷವಿಡಿ ನೀರನ್ನು ತನ್ನ ಒಡಲಿನಲ್ಲಿ ಬಚ್ಚಿಟ್ಟುಕೊಂಡು, ವರ್ಷ ಪೂರ್ತಿ ಗಿಡ ಮರ, ಪ್ರಾಣಿ, ಪಕ್ಷಿಗಳಿಗೆ ಜೀವಜಲವನ್ನು ಒದಗಿಸುತ್ತಾದೆಯೋ.! ಈಗೆ ಸಾಲು ಸಾಲು ಬೆಟ್ಟಗಳಂತೆ, ಸಾಲು ಸಾಲು ಯೋಚನೆಗಳು ಬರತೊಡಗಿತು. ಇನ್ನು ಈ ಬೆಟ್ಟಗಳನ್ನು ನೋಡಿದಾಗ, ಬೋಳು ತಲೆಯವರನ್ನು ನೋಡಿದ ಹಾಗೆ ಆಯಿತು. ಯಾಕಂದ್ರೆ ಬೆಟ್ಟದ ತುದಿಯಲ್ಲಿ ಹುಲ್ಲುಗಾವಲಿದ್ದಾರೆ ಅದರ ಸುತ್ತ ಶೋಲ ಕಾಡುಗಳು.
ಪ್ರಕೃತಿಯಲ್ಲೇ ಇಂತಹ ಸಹಜತೆ ಇರುವಾಗ ,ಇನ್ನು ಬೋಳು ತಲೆಯವರೇಕೆ ತಲೆಯಲ್ಲಿ ಕೂದಲಿಲ್ಲ ಎಂದು ಕೊರಗುವುದು ಅಲ್ವಾ.!
ದಣಿವು, ಹಸಿವನ್ನು ನೀಗಿಸಲು ತಂದಿದ್ದ ಬಿಸ್ಕೆಟ್, ನೀರನ್ನು ಕುಡಿಯುತ್ತಾ ಒಬ್ಬೊಬ್ಬರ ಪ್ರಕೃತಿಯ ಬಗೆಗಿರುವ ಅಭಿಪ್ರಾಯವನ್ನು ಕೇಳುತ್ತಿದ್ದಂತೆ ಸಮಯ ಮುಂದೆ ಸಾಗಿದ್ದು ತಿಳಿಯಲೇ ಇಲ್ಲ. ಮದ್ಯಾಹ್ನ ಎರಡು ಗಂಟೆಗೆ ಬೆಟ್ಟದಿಂದ ಇಳಿಯಲು ಶುರುಮಾಡಿದೆವು.
ನಾವು ಮಾತ್ರ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ವೇಗವಾಗಿ ನಡೆಯುತ್ತ ಫಾರೆಸ್ಟ್ ಚೆಕ್ ಪೋಸ್ಟ್'ಗೆ ತಲುಪಿದೆವು. ಬೆಟ್ಟವನ್ನು ಸುರಕ್ಷಿತವಾಗಿ ಇಳಿದು ಬಂದಿದ್ದೇವೆ ಎಂಬುದರ ಸಂಕೇತವಾಗಿ ಸಹಿ ಮಾಡಿ, ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ "ಬರ್ತೇವೆ" ಎಂದು ಹೇಳಿ ಹೊರಟೆವು. ಪ್ರದೀಪ್ ರವರು ಮತ್ತೊಮ್ಮೆ ನಾಲ್ನಾಡು ಅರಮನೆಯನ್ನು ಸರಿಯಾಗಿ ನೋಡಿಕೊಂಡು ಹೋಗೋಣವೇ ಎಂದು ಕೇಳಿದರು. ನನಗೂ ಇನ್ನೊಮ್ಮೆ ನೋಡಬೇಕೆನ್ನುವ ಆಸೆ ಇತ್ತು. ಅಂತೆಯೇ 3:30ಕ್ಕೆ ನಾಲ್ನಾಡು ಅರಮನೆಯ ಬಳಿ ಬಂದೆವು. ಸಮಯ ನಾವು ಅಂದುಕೊಂಡದ್ಕಿಂತ ತುಂಬಾ ಮುಂದೆ ಹೋಗಿದ್ದರಿಂದ, ಅರಮನೆಯೊಳಗೆ ಹೋಗಲಿಲ್ಲ. ಅರಮನೆಯನ್ನು ನೋಡಿಕೊಳ್ಳುವವರು ಕೈಕಂಬಕ್ಕೆ ಹತ್ತಿರದ ಒಳದಾರಿಯನ್ನು ಹಾಗೂ 4 ಗಂಟೆಗೆ ಮಹಾಗಣಪತಿ ಬಸ್ ಬರುತ್ತೆ ಎಂದು ತಿಳಿಸಿದರು.
ನಾವು ಒಳದಾರಿಯ ಮೂಲಕ ಮನೆ,ಗದ್ದೆ, ಕಾಫಿ ತೋಟದ ನಡುವೆ ನುಸುಳಿದ್ದ ದಾರಿಯಲ್ಲಿ ನಡೆದುಕೊಂಡು ಕೈಕಂಬ ಬಸ್'ಸ್ಟ್ಯಾಂಡ್'ಗೆ ತಲುಪಿದೆವು.
ನಮ್ಮ ಮಹೇಶ್'ರವರಿಗೆ ಮೊದಲ ಬಾರಿಗೆ ಇಂತಹದ್ದೊಂದು ಟ್ರಿಪ್, ದಣಿವು, ಹಸಿವು ಜೊತೆಗೆ ಕಾಲುಸೆಳೆತ, ಒಮ್ಮೆಲೇ ದೇಹದ ಮೇಲೆ ಕಾಡಿದುದ್ದರಿಂದ, ಹಸಿವಾಗುತ್ತಿದೆ ಎಂದು ಗೊಣಗಳು ಶುರು ಮಾಡಿದರು.
ಬಸ್ಟ್ಯಾಂಡ್'ನಲ್ಲಿ ಇವರು ಮೂವರು ಕುಳಿತುಕೊಂಡ್ರೆ, ನಾನು ಮಾತ್ರ ಸ್ವಲ್ಪ ಮಲಗೋಣ ಅಂತ ಬಿದ್ಕೊಂಡೆ, ಇನ್ನೇನ್ ಕಣ್ಣಡ್ಡ ಹೋಗಿತ್ತಷ್ಟೇ. ಅಷ್ಟೋತ್ತಿಗೆ ಬಸ್ ಬಂದೇ ಬಿಡ್ತು. ಬಸ್ಸಲ್ಲಿ ನೆಮ್ಮದಿಯಾಗಿ ಕುಳಿತುಕೊಳ್ಳೋಣ ಅಂತ ಅಂದುಕೊಂಡ್ರೆ, ಬಸ್ ಹತ್ತೋಕೆನೆ ಜಾಗ ಇಲ್ಲದಷ್ಟು ರಶ್. ಇದರ ಜೊತೆಗೆ ಈ ಶಾಲೆ ಮಕ್ಕಳ ಕಿರಿಕಿರಿ ಬೇರೆ, "ಮಡಿಕೇರಿಗೆ ಟಿಕೆಟ್ ಕೊಡಿ" ಎಂದು ಕೇಳಿದ್ರೆ. ಬಸ್ ಕಂಡಕ್ಟರ್ "ಮಡಿಕೇರಿಗೆ ಹೋಗಲ್ಲ, ಮೂರ್ನಾಡ್ ಹೋಗಿ, ಅಲ್ಲಿಂದ ಮಡಿಕೇರಿಗೆ ಹೋಗಬಹುದು" ಅಂತ ಹೇಳಿ ಟಿಕೆಟ್ ಕೊಟ್ಟರು. ಅಂತೂ ನಿಂತುಕೊಂಡೇ ಮೂರ್ನಾಡುವರೆಗೆ ಪ್ರಯಾಣಿಸಿದೆವು. ಮೂರ್ನಾಡುನಲ್ಲಿ ಇಳಿದೆವು ಪ್ರದೀಪ್'ರವರು "ಊಟ ಮಡಿಕೇರಿಯಲ್ಲಿ ಮಾಡೋಣ, ಈಗ ಬಸ್ ಬರಬಹುದು" ಎಂದಿದಕ್ಕೆ.
ಮಹೇಶ್'ರವರು ಹಸಿವಿನಿಂದ ರೊಚ್ಚಿಗೆದ್ದು, "ಬಸ್ ಹೋದ್ರೆ ಹೋಗ್ಲಿ ಇಲ್ಲೇ ಊಟ ಮಾಡ್ಕೊಂಡು ಹೋಗುವ" ಅಂತ ನಮ್ಮ ಜೊತೆ ವಾದ ಮಾಡೋಕೆ ಶುರುಮಾಡಿದರು.
ಅಲ್ಲೊಬ್ಬರಲ್ಲಿ ಮಡಿಕೇರಿ ಬಸ್ ಬಗ್ಗೆ ವಿಚಾರಿಸಿದಾಗ "ಇನ್ನೇನ್ ಎರಡು ನಿಮಿಷದಲ್ಲಿ ಬಂದ್ಬಿಡುತ್ತೆ" ಅಂತ ಹೇಳಿದ್ರು. ನಮ್ಮದೊಂದು ಗೊಂದಲದ ಸ್ಥಿತಿ, ಊಟಮಾಡೋದ ಅಥವಾ ಬಸ್ಸಿಗೆ ಹೋಗೋದಾ? ಅಷ್ಟೋತ್ತಿಗೆ ಬಸ್ ಕೂಡ ಬಂದೆ ಬಿಡ್ತು. ಮಹೇಶ್'ರನ್ನು ಸಮಾಧಾನ ಮಾಡಿ ಬಸ್ ಹತ್ತಿದೆವು.
ಬಸ್ ಮೂರ್ನಾಡ್'ನಿಂದ 4,5 ಕಿಮೀ ಮುಂದೆ ಸಾಗಿತ್ತಷ್ಟೇ, ಮಳೆಯೊಂದು ಅಬ್ಬರದಿಂದಲೇ ತನ್ನ ಕರ್ತವ್ಯವನ್ನು ಶುರು ಮಾಡಿತು.
ಗದ್ದೆ, ತೋಟ, ಹಸಿರಿನ ನಡುವೆ ತೂರಿಕೊಂಡು ಹೋಗಿದ್ದ ರಸ್ತೆಯಲ್ಲಿ ಈ ಮಳೆಗೆ ಬಸ್ಸಲ್ಲಿ ಹೋಗುವುದೇ ಏನೋ ಒಂಥರ ಖುಷಿ.
ಇನ್ನು ಪ್ರಕೃತಿಯ ಸೊಬಗಿನ ಬಗ್ಗೆ ಕೇಳ್ಬೇಕಾ, ಇಳಿಸಂಜೆಯನ್ನು ಸೋಂಕಿಸಿಕೊಂಡ ಕೊಡಗಿಗೆ, ಒಂದುಕಡೆ ಮಳೆಯ ಅಬ್ಬರದ ಜೊತೆಗೆ ಮುಖದ ಅಂದವನ್ನು ಹೆಚ್ಚಿಸಲು ಪೌಡರ್ ಬಳಸಿದಂತೆ, ಪ್ರಕೃತಿಯ ಅಂದವನ್ನು ಹೆಚ್ಚಿಸಲು ಗಾಳಿಯಲ್ಲಿ ತೇಳಿಕೊಂಡು ಬರುವ ಮಂಜು ಇವೆಲ್ಲವನ್ನು ಬಸ್ಸಿನೊಳಗೆ ಕುಳಿತುಕೊಂಡು ನೋಡುತ್ತಿದ್ದ ನನಗೆ ಎಲ್ಲೋ ಭ್ರಮೆ ಲೋಕದಲ್ಲಿದ್ದಿನೋ ಎನ್ನುವ ಭಾವವನ್ನು ಮೂಡಿಸಿತ್ತು. ಈ ಮಳೆಯ ಹಾಗೂ ಕೊಡಗಿನ ಸೊಬಗಿಗೆ ಹೊಟ್ಟೆ ಹಸಿವು ಕೂಡ ಒಂದಷ್ಟು ಹೊತ್ತು ಮರೆತೇ ಹೋಗಿತ್ತು. ಸಮಯ ಕೂಡ ಸಂಜೆ 6ರ ಗಡಿ ದಾಟಿತ್ತು. ಇನ್ನೇಗೆ ಹೋದರು 7:30ರೊಳಗೆ ಪುತ್ತೂರು ತಲುಪೋದು ಅಸಾದ್ಯವೇನಿಸಿತು. ಹಾಗಾಗಿ ಪ್ರದೀಪ್'ರವರು "ಮಡಿಕೇರಿಯಲ್ಲಿರುವ ಅರಮನೆಯನ್ನು ನೋಡಿಕೊಂಡು ಹೋಗೋಣ."ಎಂದು ಹೇಳಿದ್ರು. ಸುಮಾರು 6:10ಕ್ಕೆ ಮಡಿಕೇರಿ ತಲುಪಿದೆವು. ಮಳೆಯ ಹೊಡೆತಕ್ಕೆ ಮಡಿಕೇರಿ, ಮಡಿಕೆಯಲ್ಲಿಟ್ಟಿದ್ದ ತಣ್ಣನೆಯ ಗಂಜಿಯ ಸ್ವಾದದಂತಾಗಿತ್ತು.
ಕತ್ತಲಾಗುವ ಮುನ್ನ ಅರಮನೆಯನ್ನು ನೋಡಿಕೊಂಡು ಹೋಗಬೇಕೆಂಬ ಹಂಬಲದಿಂದ ವೇಗವಾಗಿ ಹೆಜ್ಜೆ ಹಾಕಿದೆವು. ಅರಮನೆಯ ಬಳಿ ತಲುಪಿದಾಗ ಕತ್ತಲು ಆವರಿಸಿತ್ತು.
(ಚಿತ್ರ:ಗೂಗಲ್)
ಕತ್ತಲಿನ ಅಸ್ಪಷ್ಟತೆಯಲ್ಲಿಯೇ ಅರಮನೆಗೆ ಒಂದು ಸುತ್ತು ಹಾಕಿದೆವು. ದೊಡ್ಡ ಗಡಿಯಾರ, ಫಿರಂಗಿ, ಅರಮನೆಯ ಸುತ್ತ ಕೋಟೆ, ಬಂದಿಖಾನೆ, ಹಾಗೂ ಅದರಿಂದ ಕೈದಿಗಳು ತಪ್ಪಿಸಿಕೊಂಡು ಹೋಗದಂತೆ ಇರುವ ಭದ್ರತೆ, ಅಬ್ಬಾ!! ಈಗಿನ ತಂತ್ರಜ್ಞಾನದಂತಹ ತಲೆಗಳೆಲ್ಲ ಆಗಲೇ ಇದ್ದವು ಎಂಬುದಕ್ಕೆ ಸಾಕ್ಷಿಯದಂತೆ ಇವೆ, ಈ ಅರಮನೆ.ಸುಮಾರು 7ಗಂಟೆಗೆ ಅಲ್ಲಿಂದ ಹೊರಟು, ಯಾವುದಾದರೂ ಹೋಟೆಲ್'ನಲ್ಲಿ ಹೊಟ್ಟೆ ತುಂಬಾ ಊಟ ಮಾಡಬೇಕೆನ್ನುತ ಮಡಿಕೇರಿಯ ಪಟ್ಟಣದಲ್ಲಿ ಶ್ರೀಸಾಮಾನ್ಯರ ಹೋಟೆಲ್'ನ್ನು ಹುಡುಕುತ್ತಾ "ಆ ಹೋಟೆಲ್ ಬೇಡ, ಈ ಹೋಟೆಲ್'ಗೆ ಹೋಗೋಣ, ಇದು ಬೇಡ ಆ ಹೋಟೆಲ್ ಗೆ ಹೋಗೋಣ ಅಂತ ಹೇಳಿ. ಒಂದು ಹಳೆಯ ಬೋರ್ಡ್'ನ ಚಂದದ ಹೆಸರಿರುವ ಹೋಟೆಲ್'ನೊಳಗೆ ಹೋದೆವು. ಫುಡ್ ಆರ್ಡರ್ ಮಾಡಿದ ಅರ್ಧ ಗಂಟೆಯ ನಂತರ ವೆಜ್ ಫ್ರೈಡ್ರೈಸ್ ಇಬ್ಬರಿಗೆ ತಂದು ಕೊಟ್ರು. ಆ ಪ್ಲೇಟ್, ಸ್ಪುನ್ ನೋಡಿದಾಗಲೇ ಅಂದುಕೊಂಡೆ, ಈ ನನ್ಮಕ್ಳು ಈ ಸಲ ಪರ್ಸ್'ಗೆ ಚೆನ್ನಾಗಿ ಇಕ್ತರೆ ಅಂತ!! ಇದರ ಜೊತೆಗೆ ತಮಾಷೆ ಅಂದ್ರೆ ಹಸಿವು ಹಸಿವು ಅಂತ ಬೊಬ್ಬೆ ಹಾಕ್ತಾ ಇದ್ದ ಮಹೇಶ್'ಗೆ ನಾವು ಮೂವರು ತಿಂದ ಮೇಲೆ ಅವರ ಫುಡ್ ಬಂತು. ನಮ್ದೊಂದು ಎಂತಾಹ ವಿಧಿ ಅಂದ್ರೆ, ಬೆಳಗ್ಗೆ 30ರೂ. ತಿಂದಿದ್ದ ಪಲಾವ್'ನ್ನು ಇಲ್ಲಿ 90ರೂ.ಗೆ ತಿಂದೆವು. ಇದು ಮಾತ್ರ ನಮ್ಮ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದಂತೂ ಸುಳ್ಳಾಲ್ಲ. ಅಲ್ಲಿಂದ ಹೊಟೇಲ್ನವನಿಗೆ ಬೈಯುತ್ತಾ ಮಡಿಕೇರಿ ಬಸ್ಟ್ಯಾಂಡ್'ಗೆ ಹೋದೆವು. ಅಲ್ಲೇ ರಾತ್ರಿ 10ಗಂಟೆಯವರೆಗೆ ಇದ್ದು ನಂತರ ಪುತ್ತೂರು ಬಸ್ ಹಿಡಿದು 12ಗಂಟೆಗೆ ಮತ್ತೆ ಪುತ್ತೂರು ಬಸ್ಟ್ಯಾಂಡ್'ನಲ್ಲಿಯೇ ಝೇಂಡ ಹೂಡಿದೆವು. ಬೆಳಗ್ಗೆ ಎದ್ದು ಮುಖ ತೊಳೆದು ಧರ್ಮಸ್ಥಳ ಬಸ್ಸಿಗೆ ಕಾದು ಕುಳಿತೆವು. 7:30ಕ್ಕೆ ಧರ್ಮಸ್ಥಳ ಬಸ್ ಹತ್ತಿ, ಅವರು ಮೂವರು ಉಪ್ಪಿನಂಗಡಿಯ ಬಳಿ ಇಳಿದರು.
ನಾನು ಉಜಿರೆಯಲ್ಲಿ ಇಳಿದು. ಇವತ್ತು ಹೇಗಾದರೂ ಕಾಲೇಜ್'ಗೆ ಹೋಗಲೇಬೇಕೆನ್ನುತ್ತ ಊರಿನ ಕಡೆಯ ಬಸ್ಸಿಡಿದು ಹೊರಟೆ. ಮನೆಗೆ ಹೋಗಿ ಫ್ರೆಶ್ ಆಗಿ ಮತ್ತೆ ಎರಡು ತರಗತಿಯ ನಂತರ ಕಾಲೇಜು ಹೋಗಿದ್ದೆ. ಕಾಲೇಜುಗೆ ಹೋದ್ರೆ ಕೆಲವರೆಲ್ಲ ಕೇಳೋದು "ಎಂತಾ ಅವಸ್ಥೆ ಮರ್ರೆ, ಈಗೆಲ್ಲಾ ತಿರುಗಾಡ್ಲಿಕೆ ದುಡ್ಡಿಗೆ ಏನ್ಮಾಡುತ್ತೀರಾ!?" ಎಂದು.
ನನಗೆ ಈ ಎರಡು ದಿನದ ಟ್ರಿಪ್'ಗೆ ಒಟ್ಟು 740ರೂ ವೆಚ್ಚ ಆಗಿತ್ತು. ಹೆಚ್ಚಿನ ಜನ ಅಂದುಕೊಳ್ಳೋದು ಪ್ರವಾಸ ಅಂದ್ರೆ ಸಾವಿರಾರು ರೂ. ಬೇಕು ಎಂದು. ಆದರೆ ಕಡಿಮೆ ಖರ್ಚಿನಲ್ಲಿಯೂ ಖಂಡಿತವಾಗಿಯೂ ಮನಸ್ಸಿಗೆ ಖುಷಿಯಾಗುವಂತೆ ಸುತ್ತಾಡಿಕೊಂಡು ಬರಬಹುದೆನ್ನುವುದು ಕೂಡ ಸತ್ಯ..😊
(ಮುಗಿಯಿತು...)
ಧನ್ಯವಾದಗಳು🙏




















Super naveen sir
ReplyDelete