ತಡಿಯಂಡಮೊಳ್ ಚಾರಣ ಭಾಗ -1
ಕಾಲೇಜಿನ ನಡುವೆ ಆದಿತ್ಯವಾರದ ರಜೆಯಲ್ಲಿ ಒಂದೆರಡ್ಮೂರು ಕೆಲಸ ತೆಕ್ಕೆಗೆ ಬಿದ್ದುದರಿಂದ, ಅದು ಇದು ಖರ್ಚು ಅಂತ ಕೊನೆಗೆ ಕೈಯಲ್ಲಿ 800ರೂ. ಉಳಿದಿತ್ತು. ಇತ್ತ ಎಲ್ಲಿಯೂ ಸುತ್ತಡದೆ ತುಂಬಾ ದಿನನು ಆಗಿತ್ತು. ಕೆಲವರಲ್ಲಿ ಎಲ್ಲಿಗಾದರು ಹೋಗೋಣವೇ ಎಂದು ಕೇಳಿದ್ದೆ, ಆದರೆ ಯಾರೂ ಕೂಡ ಹೊರಡಲು ತಯಾರಿರಲಿಲ್ಲ. ಕಳೆದ ಅಂತಿಮ ವರ್ಷದ ಸೀನಿಯರ್ ಪ್ರದೀಪ್'ರವರಲ್ಲಿ ಕೇಳಿದಾಗ ಕುಮಾರ ಪರ್ವತಕ್ಕೆ ಹೋಗುವುದರ ಬಗ್ಗೆ ಉತ್ಸಾಹ ತೋರಿದ್ದರು. ಕೊನೆಯ ಘಳಿಗೆಯಲ್ಲಿ ಕುಮಾರ ಪರ್ವತ ಬೇಡ " ಹೇಗೂ ಒಮ್ಮೆ ಹೋಗಿದ್ದೇವೆ, ತಡಿಯಂಡಮೋಳ್'ಗೆ ಹೋಗೋಣ" ಎಂದು ಹೇಳಿದ್ದೆ. ತಡಿಯಂಡಮೊಳ್'ನ ಕುರಿತು ಗೂಗಲ್ನಲ್ಲಿ ಹುಡುಕಾಡಿದಾಗ ನಾಲ್ನಾಡು ಅರಮನೆಯ ಬಗ್ಗೆ ಮಾಹಿತಿ ಸಿಕ್ಕಿತು. ಹಾಗೇನೆ ತಡಿಯಂಡಮೊಳ್'ಗೆ ಹೋಗಲು ಸೆಪ್ಟೆಂಬರ್ 27ಕ್ಕೆ ಫಿಕ್ಸ್ ಮಾಡಿದೇವು. ಅಂತೆಯೇ ಸೆಪ್ಟೆಂಬರ್ 27 ಶನಿವಾರದಂದು ಹೋಗಬೇಕಿತ್ತು. ಆದರೆ ಅದರ ಹಿಂದಿನ ದಿನ ನಾನು 5000mtr ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರಿಂದ ನನ್ನ ಕಾಲು ಒಂದು ದಿನದ ಬಿಡುವನ್ನು "ದಮ್ಮಯ್ಯ" ಎಂಬಂತೆ ಕೇಳುತ್ತಿತ್ತು. ಕೊನೆಗೆ ಸೋಮವಾರ ಕಾಲೇಜಿಗೆ ರಜೆ ಹಾಕುವುದೆಂದು ನಿರ್ಣಯಿಸಿ, 28ಕ್ಕೆ ಆದಿತ್ಯವಾರ ಹೊರಡಲು ಸಿದ್ದರಾದೆವು. ಮನೆಯಲ್ಲಿ ಮಡಿಕೇರಿಗೆ ಹೋಗುವುದರ ಬಗ್ಗೆ ತಿಳಿಸಿ ಹೇಳಿದೆ, ಅದಕ್ಕೆ ಒಂದಷ್ಟು ಬೈಗುಳ, ಜಾಗರೂಕತೆ ಪಾಠ, ಆರ್ಥಿಕತೆಯ ಪ್ರವಚನವನ್ನು ಆಳಿಸಿಕೊಂಡು, ಬ್ಯಾಗ್'ಗೆ ಎರಡು ಜತೆ ಬಟ್ಟೆ ತುರುಕಿಕೊಂಡು ಸಂಜೆ 4 ಗಂಟೆಗೆ ಮನೆಯಿಂದ ಹೊರಟೆ.
ಪ್ರದೀಪ್ ಜೊತೆ ಇನ್ನಿಬ್ಬರು, ಒಬ್ಬ ನನ್ನ ತರಗತಿಯ ಹರಿಪ್ರಸಾದ್, ಇನ್ನೊಬ್ಬರು ಪ್ರದೀಪ್'ನ ನೆರೆಯವರಾದ ಮಹೇಶ್'ರವರು ಪುತ್ತೂರಿನಲ್ಲಿ ಎಲ್ಲರೂ
ಜೊತೆ ಸೇರಿದೆವು.
ಈ ಮಹೇಶ್'ರವರ ಟಿಪ್ ಟಾಪಾದ ದಿರಿಸು, ಶೂ ಬ್ಯಾಗ್, ಜೊತೆಗೆ ಇವರು ಫಸ್ಟ್ ಟೈಂ ಇಂತಹ ವನವಾಸಕ್ಕೆ..!ಹೊರಟಿದ್ದಂತೆ, ಇದನ್ನೆಲ್ಲ ನೋಡಿದಾಗ "ಈ ಜನ ನಮ್ಮ ಜ್ಞಾಕ್ ಜ್ಞಾಯಿ ಬಜೆಟ್ ಗೆ ಹೊಂದಿಕೊಳ್ಳುತ್ತಾ! ಇಲ್ವಾ? ಅಥವಾ ಮಧ್ಯದಲ್ಲಿ ರೋದ್ನೆ ಕೊಡಬಹುದಾ!." ಎಂಬ ಯೋಚನೆ ಕಾಡತೊಡಗಿತು.
ಮಡಿಕೇರಿಗೆ ಬೆಳಗ್ಗೆ ತಲುಪುವ ಹಾಗೆ ಬಸ್ಸು ಹತ್ತುವ ಯೋಜನೆಯನ್ನು ರೂಪಿಸಿದೆವು. ರಾತ್ರಿ 10:30ವರೆಗೆ ಪುತ್ತೂರಿನ ಬೀದಿ ಬೀದಿಯನ್ನು ಸುತ್ತಿ ಇನ್ನೇಗೆ ಕಾಲ ಕಳೆಯಬೇಕೆಂಬುದು ಗೊತ್ತಾಗದೆ, KSRTC ಬಸ್ಟ್ಯಾಂಡ್'ನಲ್ಲಿ ಬೆಳಗ್ಗೆ 2:30ರವರೆಗೆ ವಿರಮಿಸಿ ಹೋಗೋಣವೆಂದು ಹೇಳಿದೆ. ರಾತ್ರಿ 11 ಗಂಟೆಯ ನಂತರ ಬಸ್ಟ್ಯಾಂಡ್'ನಲ್ಲಿ ಜನರಿಲ್ಲದೆ ಬಿಕೋ ಎನಿಸತೊಡಗಿತು. ಬಸ್ಸು ಬಂದು ಹೋಗುವುದು ಬಿಟ್ಟರೆ, ಅಲ್ಲೊಂದು ಇಲ್ಲೊಂದು ಪ್ರಯಾಣಿಕರಷ್ಟೇ ಬಸ್ಸಿಗೆ ಹತ್ತಿಳಿಯುತ್ತಿದ್ದರು.
ನಾನು ಪ್ರದೀಪ್ ಪ್ರಯಾಣಿಕರು ಕುಳಿತುಕೊಳ್ಳುವ ಆಸನದ ಮೇಲೆ ದೇಹದ ಭಾರವನ್ನು ಹಾಕಿ ಮಲಗಿದೆವು.
ಈ ಹರಿಪ್ರಸಾದ್ ಮತ್ತು ಮಹೇಶ್'ರವರು pubg ಆಡುತ್ತಾ ಸಮಯ ಕಳೆದರೆ, ಇವರಿಬ್ಬರ pubg ವಿಡಿಯೋ ಗೇಮ್'ನ ಗುಂಡು ಹಾರಿಸುವ ಸದ್ದು ಕಿರಿಕಿರಿ ಎನಿಸುತ್ತಿತು ಆದರೆ ಇವರಿಬ್ಬರ ನಡುವೆ ನಡೆಯುವ ಸಂಭಾಷಣೆ ಮಾತ್ರ ತುಂಬಾ ಕುತೂಹಲ ಭರಿತವಾಗಿರುತ್ತಿತ್ತು. "ಅಯಾನ್ ದೇಪ್ಪುಯ, ಇಂಬ್ಯಾಗ್ ದಿಡುಯ, ಅವೊಂಜಿ ಗನ್ ಕೋರುಯ, ಆ ಸ್ನೈಪರ್ ದೇತೋನ್, ಹೆಲ್ತ್ ಕಿಟ್ ಕೋರುಯ ಈಗೇನೆ ಇವರಿಬ್ಬರ ಮಾತುಕತೆಗಳನ್ನು ಕೇಳಿದಾಗ, ನಾವೇನು ಯುದ್ದಭೂಮಿಯಲ್ಲಿ ಇದ್ದೇವಾ, ಎಂಬ ಅನುಮಾನ ಬರುವಂತಿತ್ತು.
ಇವರಿಬ್ಬರು ಮೊದಲ ಬಾರಿ ಟ್ರೆಕ್ಕಿಂಗ್'ಗೆ ಬಂದಿದ್ದರಿಂದ ಸ್ವಲ್ಪ ಜೋಶ್ ಜಾಸ್ತಿನೇ ಇತ್ತು. ಕೊನೆಗೊಂದಿಷ್ಟು ಬೈದು "ದೇವ್ರೇ ಮೊಬೈಲ್ ಚಾರ್ಜ್ ನಾಳೆಗೆ ಕೂಡ ಒಂದಿಷ್ಟು ಇರಲಿ" ಎಂದು ಹೇಳಿದೆ. ಅದಕ್ಕೆ ನಮ್ಮ ಹರಿಪ್ರಸಾದ್ "ಫಸ್ಟ್ ಟೈಮ್ ಬತ್ತುದ ಪಂಡುದ್ ಎಂಕ್ಲೆನ್ ಚಲ್ಲ್ ಮಲ್ಪುನನ ನವೀನೆರೆ" (ಮೊದಲ ಬಾರಿ ಟ್ರೆಕ್ಕಿಂಗ್ ಬಂದಿದ್ದೇವೆ, ಅಂತ ನನ್ನನ್ನು ಕಡೆಗಣಿಸುವುದ) ಎಂಬ ವಾದ.
ಬೆಳಗ್ಗೆ 2:30ರವರೆಗೆ ಬಸ್ಟ್ಯಾಂಡ್ ಆದ್ದರಿಂದಮೈಮರೆಯದೆ ನಿದ್ದೆ ಮಾಡೋಣವೆಂದಿದ್ದೆ. ಅದಕ್ಕೆ ಹರಿಪ್ರಸಾದ್ "ಎರಂಡಾಲ ಬತ್ತೆರುಂಡ ಮುಂಕು ಮುಸುಂಟ್ ದಿಪುಣನೆ" (ಯಾರಾದರೂ ಬಂದರೆ ಮಕ, ಮೂತಿ ಚಚ್ಚುವುದೇ) ಎಂದು ಹೇಳಿದ. ಆದರೆ ಈ ಮಾತು ಇವ ಹೇಳಿದ್ದು ಮಾತ್ರ ನಮಿಗೆ ಕಾಮಿಡಿ ಎನಿಸಿತು. ಮಾತು ಮುಂದುವರೆದ ಹಾಗೇನೇ, ಮೆಲ್ಲಗೆ ಕಣ್ಣಡ್ಡ ಹೋಗಿತ್ತು.
ಈ ಮಹೇಶ್'ರವರಿಗೆ ನಮ್ಮಂತವರ ಸಾವಾಸ,ಅರ್ಧಂಬರ್ಧ ನಿದ್ದೆ ಇವೆಲ್ಲ ಹೊಸತಾಗಿದ್ದರಿಂದ ನಿದ್ದೆ ಬಾರದೆ 12:30, 1:00 ಗಂಟೆಗೆಲ್ಲ ಎದ್ದು ಅವಗವಾಗ ಕರೆದು "ನವೀನೆರೆ ಪೊಯ"(ಹೊರಡುವಾ) ಎಂಬ ಒಂದೇ ರಾಗ. ಹೇಗೋ 2:45ಕ್ಕೆ ಎದ್ದು, ಮುಖ ತೊಳೆದೆವು.
ಮಂಗಳೂರಿನಿಂದ ಮಡಿಕೇರಿಗೆ ಹೋಗುವ express ಬಸ್'ಗಳು ಬಸ್ಟ್ಯಾಂಡ್'ಗೆ ಬಾರದ ಕಾರಣ 3:00 ಗಂಟೆಗೆ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ನಿಂತೆವು.
4:30ವರೆಗೆ ಒಂದೇ, ಒಂದು ಬಸ್ ಬರಲಿಲ್ಲ. ಈ ಬಸ್ಸಿಗೆ ಕಾದು ಕಾದು ಕಣ್ಣಲ್ಲಿ ನಿದ್ದೆ ತುಂಬಿ ಬರುತ್ತಿತ್ತು. ಹರಿಪ್ರಸಾದ್ ಹಾಗೂ ಮಹೇಶ್ ಬಸ್ಸಿಗೆ ಕಾದು ಕಾದು ರೋಸಿ ಹೋಗಿ, ಇನ್ನೊಂದಿಷ್ಟು ಮಲಗಬಹುದಿತ್ತು ಎಂದು ಗೋಣಗುತ್ತ pubg ಆಡಲು ಶುರುಮಾಡಿದರು. ನಾನು ಪ್ರದೀಪ್ ರಸ್ತೆಯಲ್ಲಿ ಅತ್ತಿಂದಿತ್ತ ನಡೆಯುತ್ತಾ ಕಾಲ ಕಳೆದೆವು. ಸುಮಾರು 4:40ರ ಹೊತ್ತಿಗೆ ಮಡಿಕೇರಿ ಬಸ್ಸು ಬಂದಿತ್ತು. ಒಂದ್ಕಡೆ ನಿದ್ದೆ ಹಾಗೂ ಕಾದು ಸುಸ್ತಾಗಿದ್ದ ನಾವು ನಿಟ್ಟುಸಿರು ಬಿಡುತ್ತಾ ಬಸ್ಸಿಗೆ ಹತ್ತಿದೆವು.
ನಸುಕಿನ ಜಾವದಲ್ಲಿ ಸಂಪಾಜೆ ಘಾಟ್'ನ ಮೂಲಕ ಹಾದು ಹೋಗುವ ಬಸ್ಸಿನ ಕಿಟಕಿಯ ಗಾಜನ್ನು ಸರಿಸಿದಾಗ ವೇಗದಲ್ಲಿ ನುಗ್ಗುವ ತಂಗಾಳಿಯು ಮೊಗಕ್ಕೆ ಮುತ್ತಿಕ್ಕಿ, ಕಣ್ಣಿನ ತೇವವನ್ನು ಅವಾಗವಾಗ ಒಣಗಿಸಿ ಪದೆ ಪದೆ ಕಣ್ಣುಮುಚ್ಚಿ ತೆರೆದು ಸಾಲು ಸಾಲು ಬೆಟ್ಟಗಳನ್ನು ಕಂಡಾಗ ಸಿಗುವ ಅನುಭೂತಿ ಇದೆಯಲ್ಲ, ಅದನ್ನು ಅನುಭವಿಸಿದಾಗಲೇ ಖುಷಿಯಾಗೋದು.
ಸೂರ್ಯ ತನ್ನ ನಸುಗೆಂಪನ್ನು ಹೊರ ಸೂಸುವ ಮುನ್ನವೇ ಮಡಿಕೇರಿಗೆ ತಲುಪಿದೆವು. ಅಲ್ಲಿಂದ ಖಾಸಗಿ ಬಸ್ಸನ್ನು ಹಿಡಿದು ಕಕ್ಕಬೆಗೆ ಟಿಕೆಟ್ ಮಾಡಿದೆವು.
ನಮ್ಮ ಊರಿನ ಪ್ರೈವೇಟ್ ಬಸ್ಸಿಗಿಂತ ಅಲ್ಲಿನ ಬಸ್ಸುಗಳ ನಿರ್ವಹಣೆ ಸ್ವಲ್ಪ ಬಿನ್ನವೆನಿಸಿತು. ಊರಿನಲ್ಲಿ ಇಬ್ಬರೇ, ಅಂದ್ರೆ ಕಂಡಕ್ಟರ್, ಡ್ರೈವರ್ ಬಸ್ಸನ್ನು ನಿರ್ವಹಿಸಿದರೆ, ಇಲ್ಲಿ ಮಾತ್ರ ಬಸ್ಸನ್ನು ಮೂವರು ನಿರ್ವಹಿಸುತ್ತಾರೆ. ನಾಪೋಕ್ಲು ತಲುಪಿದಾಗ ಕಂಡಕ್ಟರ್ "ಇನ್ನು ಬಸ್ ಹೊರಡಲು ಅರ್ಧ ಗಂಟೆ ಸಮಯವಿದೆ ತಿಂಡಿ ಇಲ್ಲೇ ಮಾಡ್ಕೊಂಡು ಬಿಡಿ" ಎಂದು ಹೇಳಿದರು.
ಊರಿನ ಹೋಟೆಲ್'ಗಳಿಗೂ ಹಾಗೂ ಇಲ್ಲಿನ ಹೋಟೆಲ್'ನ ತಿಂಡಿ ತಿನಿಸುಗಳಿಗೆ ಸಾಕಷ್ಟು ಸಾಮ್ಯತೆ ಇದೆ. ನಾವು ಸಣ್ಣ ಹೋಟೆಲೊಂದರಲ್ಲಿ ಉಪಹಾರವನ್ನು ಮುಗಿಸಿ, ಹಾಗೇನೇ ಬೇಕಾಗುವಷ್ಟು ಬಿಸ್ಕೆಟ್'ನ್ನು ಬ್ಯಾಗ್'ಗೆ ಇಳಿಸಿಕೊಂಡೆವು.
ನಾಪೋಕ್ಲುನಿಂದ ಕಕ್ಕಬೆಯತ್ತ ಮಂಜು ಮುಸುಕಿದ ದಾರಿಯನ್ನು ಸೀಳಿಕೊಂಡು, ರೈಲಿನ ಹಾರ್ನ್'ನಂತೆ ಬೊಬ್ಬೆರಿಯುತ್ತ ಗದ್ದೆ, ಅಡಿಕೆತೋಟ, ಕಾಫಿಗಳನ್ನೆಲ್ಲ ಕವಿದ ಮಂಜಿನೊಂದಿಗೆ ಅದ್ದಿ ನಮ್ಮ ಕಣ್ಣಿಗೆ ಹಬ್ಬ ನೀಡುವಂತೆ ಸಾಗುತ್ತಿತ್ತು.
ಸುಮಾರು 9:00ಗಂಟೆಗೆ ಕಕ್ಕಬೆ ದಾಟಿ ಕೈಕಂಬದಲ್ಲಿ ಬೆಂಕಿಪೊಟ್ಟಣದಲ್ಲಿ ತುಂಬಿದ್ದ ಬೆಂಕಿಕಡ್ಡಿಯಂತೆ, ಜನರಿಂದ ತುಂಬಿದ್ದ ಬಸ್ಸಿನೊಳಗಿನಿಂದ ತೂರಿಕೊಂಡು ಸಾಹಸ ಮಾಡಿ ಇಳಿದೆವು. ಖಾಸಗಿ ವಾಹನ ಇಲ್ಲದವರಿಗೆ ಇಲ್ಲಿಂದಲೇ ತಡಿಯಂಡಮೊಳ್ ಚಾರಣ ಪ್ರಾರಂಭವಾಗೋದು, ಇಲ್ಲಿಂದ ತಡಿಯಂಡಮೊಳ್ ಬೆಟ್ಟಕ್ಕೆ 8.5 ಕಿಮೀ.ವಾದರೆ ನಾಲ್ನಾಡು ಅರಮನೆಗೆ ಸುಮಾರು 3ಕಿಮೀ.ನ ಅಂತರವಿದೆ. ಡಾಂಬರು ರಸ್ತೆಯಲ್ಲಿ ಹೆಜ್ಜೆ ಹಾಕುತ್ತಾ ಕುಮಾರ ಪರ್ವತ ಟ್ರೆಕ್'ನ ಬಗ್ಗೆ ನಾನು ಪ್ರದೀಪ್ ಒಂದಷ್ಟು ಸಣ್ಣ ಮಟ್ಟಿನಲ್ಲಿ ಬಿಲ್ಡಾಪ್ ಕೊಡುತ್ತಾ, ಸುಮಾರು ಒಂದು ಕಿ.ಮೀ. ಮುಂದೆ ಸಾಗಿದ ನಂತರ ಏರು ರಸ್ತೆ ಪ್ರಾರಂಭವಾಯಿತು. ನಾನೇಕೆ ಲಗೇಜ್ ಬಗ್ಗೆ ಮುತ್ತಿನಂತಹ ಮಾತನ್ನು ಹೇಳಿದೆ, ಎಂದು ಈಗ ಮಹೇಶ್'ನಿಗೆ ಅರ್ಥವಾದಂತಿತ್ತು.
ಇದೆಲ್ಲದರ ನಡುವೆ ಮಹೇಶ್'ರವರು "ಬಾಡಿಗೆಗೆ DSLR ಕ್ಯಾಮರವನ್ನು ತೆಗೆದುಕೊಂಡು ಬಂದಿದ್ದರು.
DSLR ಕ್ಯಾಮರ, ಹಾಗೂ ಮೊಬೈಲ್ ಕ್ಯಾಮರದೊಳಗೆ ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲದಲ್ಲಿ ಕಂಗೊಳಿಸುತ್ತಿದ್ದ ಹುಲ್ಲಿನ ಬಣ್ಣ ಬಣ್ಣದ ಸಣ್ಣ ಹೂವುಗಳ ಒಂದಷ್ಟು ಪಟವನ್ನು ಮೆಮೊರಿ ಕಾರ್ಡ್'ಗೆ ತುಂಬಿಸುತ್ತ ಹೆಜ್ಜೆ ಹಾಕುತ್ತಿದ್ದಂತೆ. ನಾನು ಹಿಂದೇನೆ ಉಳಿದುಕೊಂಡೇ. ಪ್ರದೀಪ್'ರವರು "ಒರ ಬೇಗ ಬಲೇ ಮರ್ರೆ. ಮುಜಿ ಗಂಟೆರ್ದು ತುಂಬು ವಾಪಸ್ ಬರೋಡು" (ಒಮ್ಮೆ ಬೇಗ ಬನ್ನಿ ಮರ್ರೆ, ಮೂರು ಗಂಟೆಯೊಳಗೆ ವಾಪಸ್ ಬರ್ಬೆಕು.) ಎಂದು ಹೇಳಿದ ಮೇಲೆ ಸಮಯದ ಅಭಾವದ ಅರಿವಾಗಿ ವೇಗವಾಗಿ ಹೆಜ್ಜೆ ಹಾಕುತ್ತ, ನಾಲ್ನಾಡು ಅರಮನೆಯ ಮುಂಭಾಗಕ್ಕೆ ತಲುಪಿದೆವು.
ಅಲ್ಲಿಗೆ ತಲುಪುವಷ್ಟರಲ್ಲೇ ಮಹೇಶ್'ರವರು ಬಳಲಿ ಬೆಂಡಾಗಿದ್ದರು. ಮೊದಲಿದ್ದ ಉತ್ಸಾಹ, ಚುರುಕು ಎಲ್ಲ ಕೇವಲ ಮೂರು ಕಿ.ಮೀ.ನ, ಬೆವರಿನಲ್ಲೇ ಆವಿಯಾಗಿ ಹೋಗಿತ್ತು.
ನಾನು ಪ್ರದೀಪ್ ಮಹೇಶ್'ರವರ ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ ಬಾರಿ ನಾವು ಹೋಗಿದ್ದ, ಕುಮಾರ ಪರ್ವತದ ಚಾರಣದ ಹಾದಿಯ ಕಠಿಣತೆಯನ್ನು ಸ್ವಲ್ಪ ಮಾತಿನ ಮಸಾಲೆ ಜಾಸ್ತಿ ಹಾಕಿ ವಿವರಿಸಿದೆವು. ಅರಮನೆಯ ಮುಂಭಾಗದಲ್ಲಿ ಮಾತನಾಡಿಕೊಂಡು ನಿಂತಿದ್ದ ನಮ್ಮನ್ನು ನೋಡಿ, ಪಕ್ಕದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಯಲ್ಲಿದ್ದ ಅರಮನೆಯನ್ನು ನೋಡಿಕೊಳ್ಳುವವರು ವೇಗವಾಗಿ ಧಾವಿಸಿ ಬಂದು, ನಮ್ಮನ್ನು ನಗುಮೊಗದಿಂದಲೇ ಸ್ವಾಗತಿಸಿದರು.
(ಮುಂದುವರೆಯುತ್ತದೆ...)
(ಚಾರಣ ಪ್ರಾರಂಭವಾಗೋದು ಇನ್ನುಮುಂದೇನೆ, ನೀವು ಖಂಡಿತ ತ. ಚಾರಣ ಭಾಗ-2ರ ಬರಹದಲ್ಲಿರುವ ದೋಷವನ್ನು ಮನ್ನಿಸಿ ಓದುತ್ತಿರಲ್ವಾ😍🙏)






Comments
Post a Comment