ಎರಡು ರಾತ್ರಿ 300+300km ಬೈಕ್ ರೈಡಿಂಗ್, 25 km ಕಾಲ್ನಡಿಗೆಯಲ್ಲಿ ಬೆಟ್ಟ, ಗುಡ್ಡ, ಸಮುದ್ರ ತೀರ ಅಂತ ತಿರುಗಾಟ, ಎರಡು ದಿನದಲ್ಲಿ ನಿದ್ದೆ ಮಾಡಿದ್ದು ಕೇವಲ 3 ಗಂಟೆ, ಸೋಮವಾರ ಮತ್ತೆ ಅವರವರ ಡ್ಯೂಟಿಗೆ,,,
ಆದರ್ಶ್, ನಾನು ಪುನೀತ್, ಕಟ್ಟಪ್ಪ ಅಂದ್ರೆ ಪ್ರತಿಕ್ ಮತ್ತೆ ಆದರ್ಶನ ತಮ್ಮ ಅಕ್ಷಯ್, ನಾವು ಒಂದು ವಾರದ ಹಿಂದೇನೆ ಗೋಕರ್ಣ ಹೋಗುವ ಬಗ್ಗೆ ಚರ್ಚಿಸಿ ಕೊನೆಗೆ ಶನಿವಾರ ಹೋಗುವುದೆಂದು ನಿರ್ಧರಿಸಿದೆವು.
ನಾನು, ಕಟ್ಟಪ್ಪ, ಅಕ್ಷಯ್ ಮೂವರು ಮನೆಯಿಂದ ಬೈಕ್ನಲ್ಲಿ ಹೊರಟರೆ,ಪುನೀತ್ ಮಂಗಳೂರಿನಿಂದ ಬೈಕ್ನಲ್ಲಿ ಬರ್ತೇನೆ ಅಂದಾ, ಇನ್ನು ಆದರ್ಶ್ ಬೆಂಗಳೂರಿನಿಂದ ಸೀದಾ ಬಂದು ಗೋಕರ್ಣದಲ್ಲೇ ಆದಿತ್ಯವಾರ ಬೆಳಗ್ಗೆ ಸಿಗ್ತೇನೆ ಎಂದು ಹೇಳಿದ.
ನಾವು ಶನಿವಾರ ಬೆಳ್ತಂಗಡಿಯಿಂದ ಸಂಜೆ 4:30ಗೆ ಬೈಕ್ start ಮಾಡಿ ಹೊರಟೆವು.ನನ್ನ ಜೊತೆ ಅಕ್ಷಯ್ ಕುಳಿತಿದ್ದ, ಮುರುಡೇಶ್ವರ ಹತ್ತಿರ ತಲುಪುವಾಗ ಪುನೀತ್ ಮತ್ತೆ ಅವನ ಫ್ರೆಂಡ್ ವಿನೀತ್ ಕೂಡ ಒಟ್ಟಿಗೆ ಸೇರಿದರು. ಅಲ್ಲೇ ಹೋಟೆಲೊಂದರಲ್ಲಿ ಊಟ ಮುಗಿಸಿಕೊಂಡು ಮತ್ತೆ 3 ಬೈಕ್ನಲ್ಲಿ ಪಯಣ ಮುಂದುವರೆಸಿದೆವು. ಪುನೀತ್ ಹಾಗೂ ಕಟ್ಟಪ್ಪ ನಮಗಿಂತ ಮುಂದೆ ಹೋದರೆ, ನಾವು ಅವರಿಗಿಂತ ತುಂಬಾ ಹಿಂದೆ ಉಳಿದೆವು. ನಾನು ಅಕ್ಷಯ್ ಮಾತಾಡಿಕೊಂಡು, ಇವರಿಗಿಂತ ಮುಂಚೆ ತಲುಪಬೇಕು ಅಂತ ಹೇಳಿ, ಗೂಗಲ್ ಮ್ಯಾಪ್ ನಂಬಿ ಕುಮಟಾ ದಿಂದ short ದಾರಿ ಹಿಡಿದೆವು. ಇನ್ನೇನು ಗೋಕರ್ಣಗೆ 7km ಇದೆ ಅನ್ನೋ ಅಷ್ಟರಲ್ಲಿ ರಸ್ತೆ ಮುಗಿದು ನೀರಿನ ಅಲೆಯ ಸದ್ದು ಕೇಳಿಸಿತು. ಒಂದು ಕ್ಷಣಕ್ಕೆ ಆಶ್ಚರ್ಯವಾಯಿತು!! ಅರೇ ಇದೇನು ಯಾವುದೋ ಸಮುದ್ರ ತೀರಕ್ಕೆ ಬಂದ ಹಾಗೆ ಅನಿಸಿತು. ಗೂಗಲ್ ನಲ್ಲಿ ಚೆಕ್ ಮಾಡಿದಾಗ ಗೊತ್ತಾಗಿದ್ದು ಇದು ಅಘನಾಶಿನಿ ನದಿ ಅಂತ.
ಅಲ್ಲೇ ಒಬ್ಬರು ಗಾಳ ಹಾಕ್ತಾ ಇದ್ದರು ಅವರಲ್ಲಿ ವಿಚಾರಿಸಿದಾಗ "ನೀವು ಬಂದಿದ್ದೇನೋ ಸರಿಯಾಗಿ ಇದೆ, ಆದರೆ ಇಲ್ಲಿ ಬೆಳಗ್ಗೆ 6ರಿಂದ ಸಂಜೆ 6ರ ತನಕ ಮಾತ್ರ ferry line (ದೋಣಿ) available ಇರುತ್ತೆ, ಅದರಲ್ಲಿ ಬೈಕ್ ಸಮೇತ ಹೋಗಬಹುದು, ಆದರೆ ಈಗಾಗಲೇ ರಾತ್ರಿ ಎರಡಗಿದೆ ನೀವು ಇಲ್ಲೇ ಮಲಗಿ ಅಂತ ಒಂದು ಕಟ್ಟಡ ತೋರಿಸಿ ಬೆಳಗ್ಗೆ ಇಲ್ಲಿಂದಲೇ ಎದ್ದು ಹೋಗಬಹುದು" ಎಂದು ಹೇಳಿದರು. ನಾವು ಅಲ್ಲಿ ನಿಲ್ಲದೆ ಬಂದ ದಾರಿಗೆ ಸುಂಕವಿಲ್ಲ ಅಂತ ವಾಪಸು ಬಂದೆವು. ಅಂತೂ ಕೊನೆಗೆ 3:30ಕ್ಕೆ ಗೋಕರ್ಣ ತಲುಪಿದೆವು. ಕಟ್ಟಪ್ಪ ಆಗಲೇ ಹೋಗಿ ರೂಮ್ ಮಾಡಿ ಗೇಟ್ ನತ್ತಿರ ಇಷ್ಟೊಂದು ತಡ ಮಾಡಿದಕ್ಕೆ ಹಲ್ಲು ಕಡಿಯುತ್ತ ನಿಂತಿದ್ದ. ಆಮೇಲೆ ರೂಮ್ಗೆ ಹೋಗಿ ಸ್ವಲ್ಪ ನಿದ್ದೆ ಮಾಡಿ, ದಿನದ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು. ಲುಂಗಿ ಉಟ್ಕೊಂಡು ಮಹಾಬಲೇಶ್ವರ ದೇವಸ್ಥಾನಕ್ಕೆ ಹೋಗಿ ಬಂದೆವು.
ಅಷ್ಟೋತ್ತಿಗೆ ಸಮಯ ಬೆಳಗ್ಗೆ 9:30 ಆಗಿತ್ತು. ಗೋಕರ್ಣದಲ್ಲೆ ಉಪಹಾರ ಮಾಡಿಕೊಂಡು ಬೆಲೆಕಾನ ಬೀಚ್ ಗೆ 7km ಕಾಲ್ನಡಿಗೆಯಲ್ಲಿಯೇ ಹೊರಟೆವು.ಸೂರ್ಯನ ತಾಪ ಏರುತ್ತಿದ್ದಿದ್ದಂತೆಯೇ ನಾವು ಬೆಲೆಕಾನ ಬೀಚ್ ಗೆ ತಲುಪಿದೆವು. ಅಲ್ಲೇ ತಂಪು ಪಾನೀಯಗಳನ್ನು ಕುಡಿದು ಸ್ವಲ್ಪ ಹೊಟ್ಟೆ ತಂಪಾಗಿಸಿ ಅಲ್ಲಿಂದ ಪ್ಯಾರಡೈಸ್ ಬೀಚ್ ಕಡೆಗೆ ಮತ್ತೆ ಟ್ರೆಕ್ ಪ್ರಾರಂಭಿಸಿದೆವು.ಕುರುಚಲು ಕಾಡಿನ ನಡುವೆ ಸಾಗಿರುವ ಈ ದಾರಿಯಲ್ಲಿ ಒಂದೆರಡು km ಸಾಗಿ ಇನ್ನೇನು ಕಾಲು ದಾರಿ ಮುಗಿಯಿತು ಅನ್ನೋಷ್ಟರಲ್ಲಿ ಬೆಟ್ಟದ ಮೇಲೆಯಿಂದ ಕಾಣಿಸೋ ಪ್ಯಾರಡೈಸ್ ಬೀಚ್'ನ ಸೌಂದರ್ಯವನ್ನು ವರ್ಣಿಸೋಕೆ ಪದಗಳೇ ಸಾಕಗಲ್ಲ ಅಷ್ಟು ಚಂದದ view point ಅದು!!! ಬಿಸಿಲಿನ heavy brightness ಗೆ ನೀಲಿಹಸಿರು ಮಿಶ್ರಿತ ಸಮುದ್ರದ ನೀರು ದೂರದಲ್ಲಿ ಕಾಣುವ ಗುಡ್ಡ, ತೀರದ ಉದ್ದಕ್ಕೂ ಹಾಸಿರುವ ಕಪ್ಪು ಕಲ್ಲು ಮನಸಿನೊಳಗೆನೆ ಒಂದ್ಸಲ ಅಬ್ಬಾ!!! ಅನಿಸಿತು.ಈ ಪ್ಯಾರಡೈಸ್ ಬೀಚ್ ನಲ್ಲಿ ಅಷ್ಟೊಂದು ಜನ ಇರಲಿಲ್ಲ. ಯಾಕೆಂದರೆ ಇಲ್ಲಿ ಬರಬೇಕೆಂದರೆ ಕಾಲ್ನಡಿಗೆಯಲ್ಲಿಯೇ ಬರಬೇಕು ಹಾಗೂ ಸಣ್ಣ ಬೀಚ್ ಕೂಡ ಹಾಗಾಗಿ ಇಲ್ಲಿ ತುಂಬಾ ಶಾಂತಿಯುತ ವಾತವರಣವಿತ್ತು.
ನಾವು ಅಲ್ಲೆ ನೀರಲ್ಲಿ ಆಟ ಆಡುತ್ತಾ ಸಮಯ ಕಳೆದು ಹೋಗಿದ್ದು ಗೊತ್ತೇ ಆಗಲಿಲ್ಲ.ಸಮಯ ಮದ್ಯಾಹ್ನ ಎರಡು ಗಂಟೆ ದಾಟಿತ್ತು, ನೀರಲ್ಲಿ ಆಟ ಆಡಲು ಬರದೆ ಬಿಸಿಲಲ್ಲಿ ಒಣಗುತ್ತಿದ್ದ ಪ್ರತಿಕ್ ಸಮಯ ಆಯ್ತು, ಬನ್ನಿ ಹೋಗೋಣ ಅಂತ ಬೊಬ್ಬೆ ಹಾಕ್ತಾ ಇದ್ದ ಅವನ ಮಾತಿಗೆ ಬೆಲೆ ಕೊಟ್ಟು ಅಲ್ಲಿಂದ ಜಾಗ ಖಾಲಿ ಮಾಡಿ half moon ಬೀಚ್ ಗೆ ಬಂದೆವು.
ಅಲ್ಲಿ ಜಾಸ್ತಿ ಹೊತ್ತು ನಿಲ್ಲದೆ, ಸೀದಾ ಓಂ ಬೀಚ್ ನತ್ತ ಹೆಜ್ಜೆ ಹಾಕಿದೆವು. ಓಂ ಬೀಚ್ ತುಂಬಾ ದೊಡ್ಡ ಬೀಚ್ ಹಾಗೂ ಅಷ್ಟೇ ಜನಸಂದಣಿ ಕೂಡವಿತ್ತು. ವಿದೇಶಿ ಮೇಡಂಗಳು ಚಡ್ಡಿಯಲ್ಲಿ surfing ಮಾಡೋದನ್ನು ನಮ್ಮ ಪುನೀತ್ ಬಾಯಿ ಬಿಟ್ಕೊಂಡು ನಿಂತಿದ್ದವನನ್ನು ಹೇಗೋ ಟೈಮ್ ಆಯ್ತು ಅಂತ ಹೇಳಿ ಎಳ್ಕೊಂಡು ಕುಡ್ಲೆ ಬೀಚ್ ಗೆ ಬಂದೆವು.ಇದರ ನಡುವೆ ನಮ್ಮ ವಿನೀತ್ ಒಮ್ಮೆಲೇ ಇಷ್ಟೊಂದು ದೂರ ನಡೆದುಕೊಂಡು ಬಂದಿದ್ದರಿಂದ ತುಂಬಾ ಬಸವಳಿದು ಬಿಟ್ಟ. ಸೂರ್ಯ ಕೂಡ ತನ್ನ ಪ್ರಖರತೆಯನ್ನು ಕಮ್ಮಿ ಮಾಡುತ್ತ ಸಂಜೆಗಿರಣವನ್ನು ಇಳಿಬಿಡುತ್ತಾ ಸಮಯ ಮುಗಿಯುತ್ತಿದೆ ಎಂಬ ಎಚ್ಚರವನ್ನು ನಾಡಿಗೆ ತಿಳಿಸುವ ಪ್ರಯತ್ನದಲ್ಲಿದ್ದ. ಇದನ್ನು ಕಂಡ ನಮ್ಮ ಕಟ್ಟಪ್ಪ ಮಾತ್ರ ನಾಳೆ ಡ್ಯೂಟಿ ಇದೆ, ಹೋಗೋಣ ಹೋಗೋಣ ಅಂತ ಬಾಯಿ ಬಡ್ಕೊಳೋಕೆ ಶುರು ಮಾಡಿದ. ನಾವು ಮಾತ್ರ ಇಷ್ಟು ದೂರ ಬೀಚ್ ಗೆ ಬಂದು ಸೂರ್ಯಾಸ್ತ ನೋಡದೆ ಇದ್ದರೆ, ಏನು ಪ್ರಯೋಜನ ಅಂತ ವಾದ ಮಾಡಿ, ಕೊನೆಗೆ ಹೇಗೋ ಸಮಾಧಾನ ಮಾಡಿ ಜಟಾಯು ತೀರ್ಥ sunset view pointಗೆ ಬಂದೆವು. ಅಲ್ಲೇ ಒಂದಷ್ಟು ಫೋಟೋ ಕ್ಲಿಕ್ಕಿಸಿ, ಸೂರ್ಯಾಸ್ತವನ್ನು ಕಣ್ತುಂಬಿಸಿಕೊಂಡು ಬೀಚ್ ಟ್ರೆಕ್ ನ ಕೊನೆಯದಾಗಿ ಗೋಕರ್ಣದ ಕಡೆಗೆ ವೇಗದ ಹೆಜ್ಜೆ ಹಾಕಿದೆವು. ಸುಮಾರು 25 km ನಡೆದುದ್ದರಿಂದ almost ಎಲ್ಲರೂ ಸುಸ್ತಾಗಿದ್ದರು. ಆಗಲೇ ಸಮಯ ಸಂಜೆ 7:30 ಆಗಿತ್ತು. ಇನ್ನು ಚುರುಗುಟ್ಟುತ್ತಿದ್ದ ಹೊಟ್ಟೆಯನ್ನು ಸ್ವಲ್ಪ ತಣ್ಣಗೆ ಮಾಡಿ ಹೊರಡುವ ಹೊತ್ತಿಗೆ ಗಂಟೆ ರಾತ್ರಿ 8:30 ಆಗಿತ್ತು. ಗೂಗಲ್ ನಲ್ಲಿ ಗೋಕರ್ಣದಿಂದ ಮನೆಗೆ ಚೆಕ್ ಮಾಡಿದಾಗ 300 km ಆಸುಪಾಸು ತೋರಿಸ್ತಾ ಇತ್ತು. ಅಲ್ಲ!! ಅಷ್ಟು ದೂರ ಈ ಬೈಕ್ನಲ್ಲಿ ಹೋಗ್ಬೇಕಾಲ್ಲ ದೇವರೆ!! ಅಂತ ಒಂದ್ಸಲ ಅನಿಸಿತು.
ಆದರ್ಶ್ ಅಲ್ಲಿಂದಲೇ ಬೆಂಗಳೂರು ಬಸ್ ಹತ್ತಿದ್ದರೆ, ನಾವು ಅಲ್ಲಿಂದ ಹೊರಟು ಬಂದೆವು. ಒಂದೇ ವೇಗದಲ್ಲಿ ಸೀದಾ ಬಂದಿದ್ದರಿಂದ ಬ್ರಹ್ಮಾವರ ತಲುಪುವಾಗ ರಾತ್ರಿ 11 ಆಗಿತ್ತು. ಪುನೀತ್ ಹಾಗೂ ವಿನೀತ್ ಮಂಗಳೂರು ಕಡೆಗೆ ಹ್ಯಾಂಡಲ್ ತಿರುಗಿಸಿದರೆ ನಾನು ಪ್ರತಿಕ್ ಅಕ್ಷಯ್ ಮನೆ ಕಡೆಯ ದಾರಿ ಹಿಡಿದೆವು. ನಿಜವಾದ ರಿಸ್ಕ್ ಇದ್ದಿದ್ದು ಬ್ರಹ್ಮಾವರದ ಮುಂದಕ್ಕೇನೆ ಯಾಕೆಂದ್ರೆ ಕಾರ್ಕಳ ಬಜಗೊಳಿ ರಸ್ತೆ ಕಾಡಿನ ನಡುವೆ ಸೀಳಿಕೊಂಡು ಹೋಗಿರೋ ರಸ್ತೆ ಅದು, ನನಗೆ ದಾರಿ ಮಧ್ಯೇ ನಂಗೆ ಬೆರು (ಕಾಡುಬೆಕ್ಕು) ಕಾಣಿಸಿದರೆ ನಮ್ಮ ಕಟ್ಟಪ್ಪನಿಗೆ ರಸ್ತೆ ಬದಿಯಲ್ಲಿ ಇನ್ನೇನು jump ಮಾಡೋಕೆ ಸಿದ್ಧವಾಗಿದ್ದ ಎರಡು ದೊಡ್ಡ ಕಡವೆ ಕಾಣಿಸಿದವಂತೆ ಚಿರತೆ ಥರ ಓಡಿಸ್ತಾ ಇದ್ದ ಬೈಕ್ ನ್ನು ಮುಂದಕ್ಕೆ ನಿದಾನಕ್ಕೆ ಬಂದೆವು. ಉಜಿರೆಗೆ ತಲುಪುವಾಗ ಸುಮಾರು 2:45am ಆಗಿತ್ತು. ನಿದಾನಕ್ಕೆ ನಿದ್ದೆ ಕೂಡ ಅವರಿಸಲು ಶುರುವಾಯಿತು. ಪದೇ ಪದೇ ಕಣ್ಣು ಉಜ್ಜಿಕೊಳ್ಳುತ್ತಾ ಸೊಮಂತಡ್ಕ ವರೆಗೆ ಬಂದೆವು. ಅಲ್ಲಿಂದ ಕಟ್ಟಪ್ಪ ಅವನ ಮನೆ ಕಡೆಗೆ ಹೋದರೆ, ಅಕ್ಷಯ್ ನನ್ನು ಕಕ್ಕಿಂಜೆಯಲ್ಲಿ ಅವನ ಮನೆಗೆ ಬಿಟ್ಟು, ನಾನು ಮನೆಯ ದಾರಿ ಹಿಡಿದಾಗ 3:30 ಆಗಿತ್ತು. ರಾತ್ರಿ 10-11ಗಂಟೆಗೆ ಬರ್ತೇನೆ ಅಂತ ಹೇಳಿದವನು, ಈಗ ಮನೆಗೆ ಹೋದರೆ ಬಯ್ತಾರೆ ಅಂತಾ ಊರಲ್ಲೇ ದೈವದ ನೇಮೋತ್ಸವ ಕಾರ್ಯಕ್ರಮ ವೊಂದಿತ್ತು ಅಲ್ಲಿಗೆ ಹೋದೆ. ದೇವರಿಗೆ ಮನದಲ್ಲೇ ಥಾಂಕ್ಸ್ ಹೇಳುತ್ತಾ, ಅಲ್ಲಿಂದ ಬೆಳಗ್ಗೆ 4:30ಕ್ಕೆ ಮನೆಗೆ ಹೋದೆ. ಮನೆಯಲ್ಲಿ ಕೇಳಿದಾಗ ಅಲ್ಲಿಂದ ಬಂದು ಸೀದಾ ನೇಮಕ್ಕೆ ಹೋಗಿದ್ದೇ ಅಂತ ಹೇಳಿದೆ.😁
Comments
Post a Comment