ಹೋ ನಿಮಿಗೆಲ್ಲ ನನ್ನ ಸೀನಿಯರ್'ಗಳೆಂದರೆ ಯಾರಂತ ಗೊತ್ತಿಲ್ಲ ಅಲ್ವಾ!? ಹಾಗದ್ರೆ ಕೇಳಿ, ಒಬ್ರು ಅಂತಿಮ ಬಿ.ಎ. ಯಾ ಕುಸುಮಧರ್ ಹಾಗೂ ಇನ್ನೊಬ್ರು ಅಂತಿಮ ವರ್ಷ ಬಿ.ಕಾಂ. ನ ಪ್ರದೀಪ್.
ಒಂದು ದಿನ ಉಳಿದುಕೊಳ್ಳಲು ಬೇಕಾಗುವಷ್ಟು ಬಟ್ಟೆ ಬರೆಗಳನ್ನು ಬ್ಯಾಗ್'ನಲ್ಲಿ ತುಂಬಿಸಿ, ಶನಿವಾರ ಒಂದು ದಿನ ಕಾಲೇಜುಗೆ ರಜೆ ಹಾಕಿ ಸುಬ್ರಹ್ಮಣ್ಯದತ್ತ ಪಯಣ ಬೆಳೆಸಿದೆವು. ಸುಬ್ರಹ್ಮಣ್ಯಕ್ಕೆ ಸುಮಾರು11:00ಗಂಟೆಗೆ ತಲುಪಿದೆವು.
ಮದ್ಯಾಹ್ನ 1 ಗಂಟೆಗೆ ಸುಬ್ರಮಣ್ಯ ದೇವಸ್ಥಾನದಿಂದ ಕುಮಾರ ಪರ್ವತದತ್ತ ಚಾರಣ ಪ್ರಾರಂಭಿಸಿದೆವು. ಸುಬ್ರಹ್ಮಣ್ಯದಿಂದ ಸುಮಾರು ಒಂದು ಕಿಲೋಮೀಟರ್ ಮುಂದೆ ಸಾಗಿದರೆ ಅರಣ್ಯ ಇಲಾಖೆಯ ನಾಮಫಲಕ ಹಾಗೂ ಕಾಡು ದಾರಿ ಕಾಣಸಿಗುತ್ತದೆ.
ಕಾಡಿನ ದಾರಿಯಲ್ಲಿ ಒಳ ಹೊಕ್ಕಿದಾಗ ಅರಣ್ಯ ಇಲಾಖೆಯವರು ಅಲ್ಲಿರುವ ಮರಗಳಿಗೆ ಅದರ ಹೆಸರನ್ನು ಅಂಟಿಸಿದ್ದರು. ಮರದ ಹೆಸರುಗಳನ್ನೆಲ್ಲ ಓದುತ್ತಾ ಮುಂದೆ ಸಾಗಿದೆವು.
ನಾವು ಭೀಮನಕಲ್ಲು ಈಗ ಸಿಗುತ್ತೆ, ಈಗ ಸಿಗುತ್ತೆ ಎಂದು ಊಹಿಸಿಕೊಂಡು ನಡೆದುಕೊಂಡು ಹೋದೆವು. ಆದರೆ ಅರಣ್ಯ ದಾಟಿ ಗಿರಿಗದ್ದೆಯ ಹತ್ತಿರ ತಲುಪುವರೆಗೂ ಭೀಮನ ಹೆಸರಿಗೆ ತಕ್ಕುದದ ಕಲ್ಲು ಸಿಗಲಿಲ್ಲ. ಅಷ್ಟೋತ್ತಿಗೆ ಕುಮಾರ ಪರ್ವತ ಹತ್ತಿಳಿದು ಇಬ್ಬರು ಬರುತ್ತಿದ್ದರು. ಅವರಲ್ಲಿ "ಭೀಮನಕಲ್ಲು ಎಲ್ಲಿ ಬರುತ್ತೆ ಸರ್" ಎಂದು ಕೇಳಿದೆವು. ಅದಕ್ಕಾವರು "ಅಲ್ಲೇ ದಾರಿಯಲ್ಲಿ ಬರುವಾಗ ಒಂದು ಕಲ್ಲು ಸಿಗಲಿಲ್ವಾ ? ಅದೇ! ಎಂದರು. ನಾವು ಭೀಮನ ಕಲ್ಲು ಎಂಬ ಹೆಸರು ಕೇಳಿದಾಗ ನನ್ನ ಕಲ್ಪನೆಯಲ್ಲಿ ಬೃಹತ್ ಗಾತ್ರದ ಕಲ್ಲನ್ನು ಊಹಿಸಿದ್ದೆ, ಜೊತೆಗೆ ನನ್ನ ಕಲ್ಪನೆಗೆ ನಿರಾಶೆಯಾಗಿದ್ದಂತೂ ಸುಳ್ಳಾಲ್ಲ.
ಅತಿ ಹೆಚ್ಚು ಮಾತನಾಡುವ ನಾನು ಹಾಗೂ ಇನ್ನು ಅಳತೆ ಮಾಡಿ ತೂಕ ಹಾಕಿ ಮಾತಾಡುವ ಪ್ರದೀಪ್ ಮತ್ತು ಕುಸುಮಾಧರ್'ರವರ ಜೊತೆ ಕಾಲೇಜು, ರಾಜಕೀಯ ಹಾಗೂ ಭವಿಷ್ಯದ ಬಗ್ಗೆ ಒಂದಷ್ಟು ಚರ್ಚೆ ಜೊತೆಗೊಂದಷ್ಟು ತಮಾಷೆ ಮಾತುಗಳನ್ನಾಡುತ್ತ ಸಂಜೆ 4:30 ಗೆ ಗಿರಿಗದ್ದೆ ಫಾರೆಸ್ಟ್ ಆಫೀಸ್'ಗೆ ತಲುಪಿದೆವು. ಅಲ್ಲಿನ ಅರಣ್ಯ ಇಲಾಖೆಯ ಸಿಬ್ಬಂದಿಯವರಿಗೆ ನಮಸ್ತೆಯೊಂದಿಗೆ ಮಾತು ಮುಂದುವರೆಸಿ ನಮ್ಮನ್ನು ಕೂಡ ಪರಿಚಯಿಸಿಕೊಂಡೆವು.
ಅಷ್ಟೋತ್ತಿಗೆ ಅಲ್ಲೊಂದು ಭಯಂಕರ ಘಟನೆ ಅಲ್ಲ!!
ಯಾರೋ ಟೆಂಟ್ ಹಾಕುವಾಗ ಫಾರೆಸ್ಟ್ ಆಫೀಸ್'ಗೆ ಬರುವ ನೀರಿನ ಪೈಪ್'ನ್ನು ಸೇರಿಸಿ ಆಣಿ ಹೊಡೆದುದ್ದರಿಂದ ಪೈಪ್ ಹೊಡೆದು ಹೋಗಿತ್ತು. ಅದರಲ್ಲಿ ಒಂದು ಕಾಮಿಡಿ ವಿಷ್ಯನು ನಡೆದು ಹೋಗಿತ್ತು. ಅವ ಅಲ್ಲಿಂದ ತೆರಳುವಾಗ ಫಾರೆಸ್ಟ್ ಸಿಬ್ಬಂದಿ ಬಳಿ "ಅಲ್ಲಿ ನೀರು ಹುಟ್ಟಿಸ್ಬಿಟ್ಟೆ" ಎಂದು ಹೇಳಿ ಹೋದನಂತೆ. ಆದ್ರೆ ಅವ್ರು ಇವನ್ಯವಾ ಮೆಂಟಲ್ ಎಂದು ತಲೆ ಕೇರ್ಕೊಂಡು ಸುಮ್ನಾದ್ರಂತೆ.
ನಾವು ಮೂವರು ಹಾಗೂ ಬೆಂಗಳೂರಿನ ಕೆಲವರು ಮಣ್ಣು ಅಗೆದು ಪೈಪ್ ಜೋಡಿಸಲು ಸಹಾಯ ಮಾಡಿದೆವು. ಅದರಲ್ಲೂ ಬೆಂಗಳೂರಿನವರು ಅರೆ ಹಿಡಿದು ಕೆಲ್ಸ ಮಾಡಿದನ್ನು ನೋಡೋದಕ್ಕೆ ಸ್ವಲ್ಪ ಜಾಲಿಯಾಗಿತ್ತು!!
ಇನ್ನು ಒಂದು ಕೆಲಸವನ್ನು ಪ್ಯಾಟೆ ಮಂದಿ ಜೊತೆ ಸೇರಿಕೊಂಡು ಮಾಡಿದ್ದು ಮಜಾವಾಗಿತ್ತು.
ನಾವು ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಗಾದೆಯಂತೆ!! ಕಡಿಮೆ ಖರ್ಚಿನಲ್ಲಿ ಟ್ರೆಕ್ಕಿಂಗ್ ಪ್ಲಾನ್ ಹಾಕಿದ್ದುದ್ದರಿಂದ ಬರುವಾಗಲೆ ಚಪಾತಿ, ಕ್ರೀಮ್ ಬನ್ ಹಾಗೂ ಬಿಸ್ಕೆಟ್ ನ್ನು ಒಂದು ದಿನಕ್ಕೆ ಬೇಕಾಗುವಷ್ಟು ತಂದಿದ್ದೆವು. ನಾವು ರಾತ್ರಿ ಕ್ಯಾಂಪ್ ಫೈರ್ ಹಾಕುವ ಯೋಚನೆಯಲ್ಲಿ ಬಂದಿದ್ದೆವು. ಆದರೆ ಕ್ಯಾಂಪ್ ಫೈರ್ ಹಾಕಬಾರದು ಎಂದು ಅಲ್ಲಿನ ಸಿಬ್ಬಂದಿ ಹೇಳಿದರು. ಇದು ಒಳ್ಳೆಯ ನಿರ್ಧಾರನೆ ಯಾಕೆಂದ್ರೆ ಬೇಸಿಗೆ ಬೇರೆ ದಿನ ದಿನ ಕಳೆದಂತೆ ಏರುತ್ತಿರುವ ತಾಪಮಾನ ಜೊತೆಗೆ ಒಣಗಿದ ಹುಲ್ಲು! ಅವಘಡಕ್ಕೆ ಸಣ್ಣ ಕಾರಣಗಳೇ ಸಾಕು..
ರಾತ್ರಿ ಹೊಟ್ಟೆ ತುಂಬಿಸಿಕೊಳ್ಳುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.! ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಮಲಗಿದೆವು.
ಚಳಿಯಂತೂ ಕೈ ಕಾಲು ನಡುಗುವಷ್ಟು ವಿಪರೀತವಿತ್ತು.
ಬೆಳಗ್ಗೆ 4:30ಗೆ ಎಚ್ಚರವಾದಾಗ ಒಂದು ತಂಡ ಹಣವನ್ನು ಪಾವತಿಸಿ ಅದಾಗಲೇ ಹೊರಟಾಗಿತ್ತು. ನಾವು ಈ ಚಳಿಯ ಭೂತವನ್ನು ಓಡಿಸಿ ಎದ್ದು ಹೊರಡುವ ಹೊತ್ತಿಗೆ 5:15ಆಗಿತ್ತು. ನೀರಿನ ಬಾಟಲಿ, ಬಿಸ್ಕೆಟ್ ಪ್ಯಾಕೆಟ್ ಹಾಗೂ ಪ್ಲಾಸ್ಟಿಕ್ ಕವರ್'ಗಳ ಲೆಕ್ಕ ಹಾಗೂ 350 ರೂಪಾಯಿಯಂತೆ ಪಾವತಿಸಿ ಹೊರಡಲು ಸಿದ್ದರದೆವು. ಒಬ್ಬರೇ ಚಾರಣ ಹೋಗುವಂತಿಲ್ಲ ಎಂಬ ನಿಯಮ ಇದ್ದುದ್ದರಿಂದ ತುಮಕೂರಿನ ಕಾರ್ತಿಕ್ ಎಂಬುವರನ್ನು ಫಾರೆಸ್ಟ್ ಸಿಬ್ಬಂದಿ ನಮ್ಮ ಜೊತೆಯಲ್ಲಿ ಹೋಗುವಂತೆ ಹೇಳಿದರು. ಚಾರಣ ಪ್ರಾರಂಭಿಸುವಾಗಲೆ ನಾಲ್ಕೂವರೆಗೆ ಹೊರಟವರನ್ನು ಓವರ್ ಟೇಕ್ ಮಾಡಿಕೊಂಡು ಹೋಗುವ ಎಂದು ನಾಲ್ವರ್ ಮಾತನಾಡುತ್ತ ಹೊರಟೆವು. ಕಲ್ಲಿನ ಮಂಟಪ ತಲುಪಿದ ನಂತರ ಬಲ ಬದಿಯ ದಾರಿಯಲ್ಲಿ ಹೋದೆವು. ಮುಂದೆ ಹೋದಂತೆ ದಾರಿಯೇ ಇಲ್ಲ!! ಇದೇನು ಈಗಾಯ್ತಲ್ಲ! ಅಂದುಕೊಂಡೆ! ಕತ್ತಲೆ ಬೇರೆ ಎತ್ತ ಟಾರ್ಚ್ ಲೈಟ್ ಹಾಕಿದ್ರು, ಅನಂತ..!! ಸುಮಾರು ದೂರ ಮುಂದೆ ಸಾಗಿಯಾಗಿತ್ತು. ವಾಪಸು ಹೋಗುವ ಯೋಚನೆಯನ್ನು ಮಾಡದೆ ಏಣಿಯನ್ನು ಹತ್ತಿದಂತೆ ತೇವಳಿಕೊಂಡು ಹತ್ತಿದೆವು. ನನ್ನ ಹಿಂದೆಯಿಂದ ಕುಸುಮಾಧಾರ ಹಾಗೂ ಪ್ರದೀಪ್'ರವರು shortcut ದಾರಿ ಅಂತ ಹೇಳಿಕೊಂಡು "ಲಗಡಿ ತೆಗಿದ್ಯಾಲ್ಲೋ" ಎಂದು ಬೈಯುತ್ತಾ ಹತ್ತಿದ್ದರು.
ಕೊನೆಗೆ ಆಗೋ ಇಗೋ ಭತ್ತದ ರಾಶಿ ಬೆಟ್ಟದ ಹತ್ತಿರ ದಾರಿಗೆ ಕನೆಕ್ಟಾದೆವು. ಭತ್ತದ ರಾಶಿ ಬೆಟ್ಟ ದಾಟಿ ಶೇಷ ಪರ್ವತ ತಲುಪುವ ವೇಳೆಗೆ ಮೂಡಣದಿಂದ ಸೂರ್ಯನ ಕಿರಣಗಳು ಭೂಮಿಯನ್ನು ಚುಂಬಿಸಲು ಸಜ್ಜಾಗಿರುವಂತೆ ಆಗಸವೆಲ್ಲ ರಂಗಾಗಿತ್ತು. ಶೇಷಪರ್ವತದತ್ತಿರ 4:30ಗೆ ಹೊರಟವರು ಸಿಕ್ಕರು. ಅವರೊಂದಿಗೆ ಸ್ವಲ್ಪ ಮಾತಾಡಿ ನಾವು ಮುಂದೆ ಸಾಗಿದೆವು. ನಮ್ಮ ಜೊತೆ ಬಂದಿದ್ದ ಕಾರ್ತಿಕ್'ರವರು ಅವರ ಜೊತೆ ಹೆಜ್ಜೆ ಹಾಕಿದರು. ಶೇಷಪರ್ವತದಿಂದ ಕುಮಾರಪರ್ವತಕ್ಕೆ ಸಾಗುವಾಗ ಸಣ್ಣ ಒಂದೇ ತೆರನಾದ ಕಾಡು ಕಾಣಸಿಗುತ್ತದೆ.
ಇಲ್ಲಿ ಹಕ್ಕಿಗಳ ಇಂಚರ ಹಾಗೂ ಗಾಳಿಯ ವೇಗಕ್ಕೆ ಮರಗಳ ಟ್ಯೂನ್'ಗಳನ್ನು ಕೇಳಿಸ್ತಾ ಇದ್ರೆ ಮೈಮರೆಯೊದರಲ್ಲಿ ಅನುಮಾನವೇ ಇಲ್ಲ!! ಜೊತೆಗೆ ಇಲ್ಲಿ ಸೂರ್ಯನ ಕಿರಣಗಳು ಭೂಮಿಯನ್ನು ಸ್ಪರ್ಶಿಸಬೇಕಾದರೆ ಮರದ ಎಲೆಗಳ ಚಪ್ಪರದೊಡನೆ ಸೆಣಸಡಲೆಬೇಕು.
ಸುಮಾರು 7:30ಆಗುವಾಗ ಎಲ್ಲರಿಗಿಂತ ಮೊದಲು ಕುಮಾರಪರ್ವತ ತಲುಪಿದೆವು. ಅಲ್ಲೊಂದು ಕಲ್ಲಿನ ಗುಪ್ಪೆಯಿಂದಲೇ ನಿರ್ಮಿಸಿದ ಶ್ರೀ ಶಾಂತ ಮಲ್ಲಿಕಾರ್ಜುನ ದೇವಸ್ಥಾನವಿದೆ.
ಅಲ್ಲೇ ಸ್ವಲ್ಪ ಮುಂದೆ ಹೋಗಿ ಸುತ್ತಾಡಿದಾಗ ಹೊಸ ಲೋಕವೇ ತೆರೆದಂತೆ ಕಣ್ಣು ಹಾಯಿಸಿದಷ್ಟು ಬೆಟ್ಟಗಳ ಸಾಲುಗಳು, ಪ್ರಕೃತಿಯ ಅಗಾಧತೆಯ ಎದುರು ಸೂರ್ಯ ಕೂಡ ಆಗಸಲೋಕದಲ್ಲಿ ಪಿಳ್ಳೆಯಂತೆ ಗೌಣವಾಗಿ ಕಾಣಿಸಿದ.
ಅಷ್ಟೋತ್ತಿಗೆ ದಣಿದ ದೇಹಕ್ಕೆ ಹೊಟ್ಟೆಯಿಂದ ನೋಟಿಫಿಕೇಶನ್ ಬಂತು. ಅಲ್ಲೇ ಪಕ್ಕದಲ್ಲಿ ಮೂವರು ಕುಳಿತು ಕ್ರೀಮ್ ಬನ್ ಹಾಗೂ ನೀರನ್ನು ಕುಡಿದು ಹೊಟ್ಟೆಯನ್ನು ತಣ್ಣಗಾಗಿಸಿದೆವು.
ನಾವು ಕುಳಿತ ಪಕ್ಕದಲ್ಲೇ ಆನೆಯ ಒಣಗಿದ ಲದ್ದಿ ಕೂಡ ಇದ್ದಿತು. ಮೋಸ್ಟ್ಲಿ ಎರಡು ವಾರದ ಹಿಂದೆ ಬಂದಿತ್ತೇನೋ.!?
9:30 ಆಗುವಾಗ ಕುಮಾರಾಪರ್ವತದಿಂದ ಇಳಿಯೋಕೆ ಶುರುಮಾಡಿದೆವು.
ಭತ್ತದ ರಾಶಿ ಬೆಟ್ಟದ ಹತ್ತಿರ ಬೆಂಗಳೂರಿನ ಯುವತಿಯೊಬ್ಬರು ಮುಂದೆ ಬೆಟ್ಟವನ್ನು ಹತ್ತೋಕೆ ಆಗದೆ ಅಳ್ತಾ ಇದ್ದರು. ಅವರ ಜೊತೆಯಲ್ಲಿದ್ದವರೆಲ್ಲ ಒಬ್ಬರನ್ನು ಬಿಟ್ಟು ಮತ್ತೆಲ್ಲರು ಮುಂದೆ ಹೋಗಿಯಾಗಿತ್ತು. ಆದ್ದರಿಂದ ಕರೆಮಾಡಲು ಸಹಾಯ ಕೇಳಿದಾಗ ನಮ್ಮ ಕರುಣಾಮಯಿ ಕುಸುಮಧಾರ್'ರವರ ಹೊಟ್ಟೆ ಚುರುಕ್ಕೆಂದು ಕರೆ ಮಾಡಲು ಸಹಾಯ ಮಾಡಿದರು. ಆದರೆ ಕರೆ ಮಾಡಲು ಸಿಮ್ ಬದಲಿಸುವಾಗ 16GB ಮೆಮೊರಿ ಕಾರ್ಡ್ ಬಿದ್ದೋಯ್ತು. ಎಷ್ಟೇ ಹುಡುಕಿದರು ಕೂಡ ಸಿಗಲೇ ಇಲ್ಲ. ಅಂತೂ ಭತ್ತದ ರಾಶಿಯ ಮಡಿಲಿಗೆ ಮೆಮೊರಿ ಕಾರ್ಡ್'ನ್ನು ಅರ್ಪಿಸಿ ಬಂದೆವು.
ಸುಮಾರು 11:00ಗಂಟೆಗೆ ಗಿರಿಗದ್ದೆ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ತಲುಪಿದೆವು. ಫಾರೆಸ್ಟ್ ಸಿಬ್ಬಂದಿಗಳಿಗೆ ಪ್ಲಾಸ್ಟಿಕ್ ಕವರ್ ಹಾಗೂ ನೀರಿನ ಬಾಟಲ್'ಗಳ ಲೆಕ್ಕವನ್ನು ನೀಡಿ, 11:30ಕ್ಕೆ ಅಲ್ಲಿಂದ ಹೊರಟೆವು.
ಮದ್ಯಾಹ್ನ 1:30ಯಾಗುವಾಗ ಸುಬ್ರಹ್ಮಣ್ಯ ತಲುಪಿ, ಮದ್ಯಾಹ್ನದ ಊಟವನ್ನು ಹೋಟೆಲೊಂದರಲ್ಲಿ ಮುಗಿಸಿ, ಧರ್ಮಸ್ಥಳದ ಕಡೆಯ ಬಸ್ಸನ್ನು ಹತ್ತಿದೆವು.
















well done naveena,, really wonderful trucking with you,,,,
ReplyDeleteThanks😊
DeleteWow amazing experience for u and ur team ....Such a wonderful writing. ...
ReplyDeleteThanks😍
DeleteWelldone brothers...keep it up..your article has given a good insight to us to plan for the same place..
ReplyDeleteThanks😊
Delete