ಹಾಸನದಿಂದ ಹಳೇಬೀಡಿಗೆ ಸುಮಾರು 30 ಕಿಲೋಮೀಟರ್, ಬಸ್ಸಿನಲ್ಲಿ ಹೋಗುವ ಎಂದು ಅನಿಸಿತು. ಆದರೆ ಬಸ್ಸಿನಲ್ಲಿ ನಿದ್ದೆ ಮಾಡಿಕೊಂಡು ಹೋಗುವ ಬದಲು, ಸ್ವಲ್ಪ ಭಿನ್ನವಾಗಿ ಸೈಕಲ್ ನಲ್ಲಿ ಹೋಗಿಬರೋಣವೆನಿಸಿತು.
ನೇಸರನ ಬಿಸಿಲ ತಾಪ ಜಾಸ್ತಿಯಾಗುತ್ತಿದ್ದಂತೆ ಸೈಕಲ್ ಏರಿ ಹಳೇಬೀಡಿನತ್ತ ಹೊರಟೆ. ಬಸ್ಸುಯಾನಕ್ಕಿಂತ ಸೈಕಲ್ ಸವಾರಿಯ ಮಜಾನೆ ಬೇರೆ!. ದೂರ ಸಾಗಿದಂತೆ, ಸುಸ್ತಾಗಿ ಮಜಾ ಎಲ್ಲೋಯ್ತು ಎಂದು ಹುಡುಕುವ ಪರಿಸ್ಥಿತಿಯು ಬಂತು.
ಆದರೆ ನನ್ನಲ್ಲಿನ ಕುತೂಹಲ ಎಳೆದೊಯ್ದು, ನೇಸರ ನೆತ್ತಿಯ ಮೇಲೆ ತಲುಪುವ ವೇಳೆಗೆ ನಾನು ಹಳೇಬೀಡು ತಲುಪಿದೆ.
ಹಾಸನದಿಂದ ಸಾಲಗಾಮೆ ಮಾರ್ಗವಾಗಿ ಹಳೇಬೀಡಿಗೆ ಬಂದರೆ, ನಮ್ಮನ್ನು ಸ್ವಾಗತಿಸುವುದು ದ್ವಾರಸಮುದ್ರ.
ಆದರೆ ಈ ದ್ವಾರ ಸಮುದ್ರದ ಹೆಸರಿನಂತೆ ಇಲ್ಲದೆ, ಭಿನ್ನವಾಗಿ ಬರಡಗಿರೋದನ್ನು ಕಂಡು ಮನಸ್ಸಿಗೆ ಖೇದವುಂಟಾಯಿತು.
ಹಳೇಬೀಡು ಹೊಯ್ಸಳರ 12ನೇ ಶತಮಾನದಲ್ಲಿ ರಾಜಧಾನಿಯಾಗಿತ್ತು. ಈ ಹೊಯ್ಸಳೇಶ್ವರ ದೇವಾಲಯವನ್ನು 1121ರಲ್ಲಿ ಕಟ್ಟಿಸಲಾಯಿತೆಂದು ಹೇಳಲಾಗಿದೆ. ಈ ದೇವಾಲಯವನ್ನು ಪೂರ್ಣಗೊಳಿಸಲು ಸುಮಾರು 190 ವರ್ಷಗಳಾಗಿದೆಯೆಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಹೊಯ್ಸಳೇಶ್ವರ ದೇವಾಲಯವು ನಾಲ್ಕು ಪ್ರವೇಶ ದ್ವಾರಗಳನ್ನು ಹೊಂದಿದ್ದು,
ನಕ್ಷತ್ರಾಕಾರದಲ್ಲಿ ಬಳಪದ ಕಲ್ಲಿನಿಂದ ನಿರ್ಮಿಸಲ್ಪಟ್ಟಿವೆ. ಹಾಗೂ ದೇವಾಲಯದ ಗೋಡೆಗಳ ಮೇಲೆ ಪೌರಾಣಿಕ ಚಿತ್ರಣಗಳಿಂದ ಕೂಡಿದ ಕೆತ್ತನೆಗಳು, ಶಿಲ್ಪಾ ಸಮೃದ್ಧಿಯಿಂದ ಕೂಡಿ ಅತ್ಯಾಕರ್ಷಕವಾಗಿವೆ.
ಈ ದೇವಾಲಯದಲ್ಲಿ ಸುಮಾರು 35,000 ಕ್ಕೂ ಹೆಚ್ಚು ಶಿಲ್ಪಾಕೃತಿಗಳಿಂದ ಮೈದುಂಬಿಕೊಂಡಿವೆ.
ಈ ದೇವಾಲಯದ ಒಳಗೆ, ಈಶ್ವರ ಹಾಗೂ ಹೊಯ್ಸಳೇಶ್ವರ ದೇವರ ಎದುರಿಗೆ ಎರಡು ನಂದಿ ಮಂಟಪಗಳಿವೆ.
ಈ ದೇವಾಲಯದ ನಿರ್ಮಾಣವು ಮಹಮ್ಮದ್ದರ ದಾಳಿಯಿಂದಾಗಿ ಪೂರ್ಣಗೊಂಡಿಲ್ಲ. ಬಹುಶಃ ಪೂರ್ಣಗೊಂಡಿದ್ದರೆ ಶಿಲ್ಪಕಲೆಯ ವೈಭವ ಇನ್ನು ಹೆಚ್ಚಾಗಿರುತ್ತಿತ್ತೇನೋ!
ಆಗೇನೆ ಇಲ್ಲೊಂದು ಮ್ಯೂಸಿಯಂ ಇದೆ.
ಇಲ್ಲಿ ಶಿಥಿಲಾವಸ್ಥೆಯಲ್ಲಿರುವ ಸಾವಿರಕ್ಕೂ ಹೆಚ್ಚು ಶಿಲ್ಪಾಕೃತಿಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಇದು ತುಂಬಾ ಚೆನ್ನಾಗಿದೆ.
ದೇವಾಲಯದ ಶಿಲ್ಪಾಕೃತಿಗಳನ್ನು ನೋಡುತ್ತಾ ಶಿಲ್ಪಿಗಳ ಕೆತ್ತನೆಯ ಕೈಚಲಕವನ್ನು ಊಹಿಸಿಕೊಳ್ಳುತ್ತಿದ್ದ ಆಗೆ ಸಮಯ ಜಾರಿದ್ದು ತಿಳಿಯಲೇ ಇಲ್ಲ. ಅಷ್ಟೋತ್ತಿಗಾಗಲೇ ಸೂರ್ಯನ ತಾಪ ಇಳಿಮುಖದತ್ತ ಸಾಗಿತ್ತು. ಎರಡು ಎಳನೀರನ್ನು ಕುಡಿದು ಸೈಕಲ್ ಏರಿ ಹಳೇಬೀಡಿನ ಶಿಲ್ಪದ ಕೆತ್ತನೆಗಳ ಕಲೆಯ ವೈಭವವನ್ನು ನೆನೆದುಕೊಳ್ಳುತ್ತ, ಬಂದ ದಾರಿಯತ್ತ ಪಯಣ ಬೆಳೆಸಿದೆ.
ಹಾಸನ ತಲುಪುವ ವೇಳೆಗೆ ಸೂರ್ಯನು ಆಗಸದಿಂದ ಕಾಣೆಯಾಗಿದ್ದ. ನನಗಂತೂ ಹಳೇಬೀಡಿನ ದೇವಾಲಯದ ಶಿಲ್ಪಕಲೆಗಳು ಮನಸ್ಸಿಗೆ ತುಂಬಾ ಮುದ ನೀಡಿತು.
ಸಾಧ್ಯವಾದರೆ ನೀವೊಮ್ಮೆ ಭೇಟಿ ನೀಡಿ.
ಹೊಯ್ಸಳೇಶ್ವರ ದೇವಾಲಯವನ್ನು ಹಾಗೂ ಶಿಲ್ಪಾಕೃತಿಗಳನ್ನು ಕಣ್ತುಂಬಿಕೊಳ್ಳಿ.








Comments
Post a Comment