Skip to main content

ಸೈಕಲ್ ಸವಾರಿ... ಹಾಸನ to ಪುದುವೆಟ್ಟು(near ಧರ್ಮಸ್ಥಳ)


       ಹೈಸ್ಕೂಲಿನಲ್ಲಿ ಇರುವಾಗ ಶುರುವಾದ ಸೈಕಲ್ ಸವಾರಿಯ ಹುಚ್ಚು ಈಗಲೂ ಕೂಡ ಕಡಿಮೆಯಾಗಲೇ ಇಲ್ಲ. ಯಾವಾಗ  ನಮಗೆ ಸುಸ್ತಾಗುವುದು ಕೂಡ ಒಂದು ನಶೆಯಂತೆ ಅನುಭವಕ್ಕೆ ಬರುತ್ತದೋ,! ಅದೊಂಥರಾ ಮಜಾನೆ ಬೇರೆ. ದೇಹ ದಣಿದು pain relief ಆಗುವಾಗ ಅದು ಇನ್ನೊಂದು ಥರ ಅನುಭವ, ದೇಹ ದಣಿದು ಬೆವರು ಸುರಿದ ನಂತರ ತಂಗಾಳಿಗೆ ಮೊಗವನ್ನೊಡ್ಡಿದಾಗ ಸಿಗುವ ಖುಷಿನೆ ಬೇರೆ. ಇದನ್ನೆಲ್ಲ ಅನುಭವಿಸಬೇಕಾದರೆ 40 ಕಿಲೋಮೀಟರ್ ಮೇಲ್ಪಟ್ಟ ಸೈಕಲ್ ಸವಾರಿ ಮಾಡಬೇಕು. ಈಗ ವಿಷಯಕ್ಕೆ ಬರೋಣ.
ಹಾಸನದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದೆ, ಕೆಲವು ಅನಿವಾರ್ಯ ಕಾರಣಗಳಿಂದ ಹಾಸನವನ್ನು ಬಿಡಬೇಕಾಗಿ ಬಂತು. 
ಆಗ ನನ್ನ ಜೊತೆ ಬೇಲೂರು, ಹಳೇಬೀಡು, ಗೊರೂರು ಹಾಗೂ ಹಾಸನದ ಗಲ್ಲಿ ಗಲ್ಲಿನು ಸುತ್ತಿದ್ದ ಸೈಕಲ್'ನ್ನು ಮಾರಿ ಹೋಗೋದಾ? ಅಥವಾ ಮನೆಗೆ ಸೈಕಲ್'ನಲ್ಲೇ ಹೋಗೋದಾ? ಎಂದು ಯೋಚಿಸ್ತಾ ಇದ್ದೆ. ಅವಾಗ್ಲೇ ಅಮ್ಮನಿಗೆ ಫೋನ್ ಮಾಡಿ "ಅಮ್ಮ ಯಾನ್  ಸೈಕಲ್'ಡು ಇಲ್ಲಾಗ್ ಬರೊಡ" (ಅಮ್ಮ ನಾನು ಸೈಕಲ್'ನಲ್ಲಿ ಊರಿಗೆ ಬರ್ಬೇಕಾ) ಎಂದು ಕೇಳಿದೆ ತಡ, ಒಂದಷ್ಟು ಬೈಗುಳದ ಜೊತೆಗೆ ಬುದ್ದಿವಾದದ ಮಿಶ್ರಿತ ಮಾತುಗಳು ಅಮ್ಮನ ಬಾಯಿಂದ ಉದುರಿ, ನನ್ನ ಕಿವಿಯೊಳಗೆ ನೊಣ ನುಸುಳಿದಂತಾಯಿತು. ಅಮ್ಮನ ಇಂತಹ ಮಾತುಗಳಿಗೆ ಕಾರಣಗಳು ಕೂಡ ಇತ್ತು. ಒಂದು ವಾರದ ಹಿಂದೆ ಸುರಿದ ಭಾರಿ ಮಳೆಗೆ ಚಾರ್ಮಾಡಿ ಘಾಟ್'ನಲ್ಲಿ ಎರಡು ಬಾರಿ ಭೂ ಕುಸಿತ ಉಂಟಾಗಿತ್ತು. ಮತ್ತು ಶಿರಡಿ ಘಾಟ್ ಕಾಮಗಾರಿಯಿಂದಾಗಿ ವಾಹನ ಸಂಚಾರವನ್ನು ನಿಷೇಧಿಸಿದ್ದರು. ಆದರೂ ಸೈಕಲ್'ನಲ್ಲಿ ಹಾಸನದಿಂದ ನನ್ನ ಊರಿಗೆ ಅಂದ್ರೆ ಪುದುವೆಟ್ಟಿಗೆ (ಧರ್ಮಸ್ಥಳ ಹತ್ತಿರ) ಚಾರ್ಮಾಡಿ ಮೂಲಕ ಹೋಗಲೇಬೇಕು ಎಂಬ ಆಸೆ ಮೂಡಿತ್ತು. ಯಾಕೆಂದರೆ ಮಳೆಗಾಲದಲ್ಲಿ ಚಾರ್ಮಾಡಿಯ ಸೊಬಗನ್ನು ಸವಿಯಬೇಕು ಅದರಲ್ಲೂ ಸೈಕಲ್'ನಲ್ಲಿ ಪಯಣಿಸಬೇಕೆಂಬ ಹಂಬಲ, ಅದರಂತೆಯೇ ಎಷ್ಟು ಸಮಯಕ್ಕೆ ಎಷ್ಟು ಕಿಲೋಮೀಟರ್'ಗೆ ಎಲ್ಲಿಗೆ ತಲುಪಬಹುದು ಎಂಬ ಅಂದಾಜು ಪ್ಲಾನ್ ಹಾಕಿಕೊಂಡೆ.

 ಜೊತೆಗೆ ಸೈಕಲನ್ನು ಸಣ್ಣ ಪುಟ್ಟ ರಿಪೇರಿ ಮಾಡಿಸಿ, ಮನೆಗೆ ಫೋನ್ ಮಾಡಿ "ನಾಳೆ ಮನೆಗೆ ಬರುತ್ತೇನೆ" ಸೈಕಲ್'ನಲ್ಲಿ ಬರ್ತೆನೆ ಅಂತ ಮಾತ್ರ ಹೇಳಿಲ್ಲ!. ಅಂತೂ ಇಂತೂ ಕೊನೆಗೆ 21ನೆ ತಾರೀಕು ಬೆಳಗ್ಗೆ ಬ್ಯಾಗ್'ಗೆ ಚಿಕ್ಕ ಗಾಳಿ ಪಂಪು, ವಾಲ್ ಟ್ಯೂಬ್,ಹಾಗೂ ಕಟಿಂಗ್'ಪ್ಲೇರ್ಸ್ ಹಾಗೂ ಕೆಲವು ಅಗತ್ಯ ವಸ್ತುಗಳನ್ನು ಬ್ಯಾಗ್'ಗೆ ತುಂಬಿಸಿ, ರೈನ್ ಕೋಟ್ ಧರಿಸಿಕೊಂಡು ಹಾಸನದಿಂದ 5:30ಕ್ಕೆ ಹೊರಟೆ.


ಬೆಳಬೆಳಗ್ಗೆನೇ ಹಾಸನದಿಂದಲೇ ವರುಣರಾಯ ಜಿಟಿ ಪಿಟಿ ಕಾರ್ಯಕ್ರಮ ಶುರುವಿಟ್ಟುಕೊಂಡಿದ್ದರಿಂದ ಸೈಕಲ್'ನ ವೇಗ ಜಾಸ್ತಿಯಾದಂತೆ ಚಳಿಯಾಗತೊಡಗಿತು. ಜೊತೆಗೆ ಸೂರ್ಯ ನಿದ್ದೆಯಿಂದ ಎದ್ದೇಳುವ ಲಕ್ಷಣ ಕಾಣಿಸತೊಡಗಿತು.

ಸುಮಾರು 7:15ಕ್ಕೆ ಬೇಲೂರು ತಲುಪಿದೆ.
ಇನ್ನು ಸೈಕಲ್ ಸವಾರಿಯ ಥ್ರಿಲ್ಲಿಂಗ್ ಅಂತ ಶುರುವಾಗೋದು ಬೇಲೂರಿನಿಂದಲೇ. ಯಾಕೆಂದರೆ ಹಾಸನದಿಂದ ಬೇಲೂರಿನವರೆಗೆ ರಸ್ತೆ ಹೆಚ್ಚಾಗಿ ನೇರವಾಗಿರೋದರಿಂದ ರೈಡಿಂಗ್ ಒಂಥರ ಬೋರ್!.
 ಬೇಲೂರಿನಿಂದ 10ಕೀ.ಮಿ. ಮುಂದೆ ಸಾಗಿದಾಗ ಮಲೆನಾಡಿನ ಶೈಲಿಯ ಮಳೆಯು ನನ್ನ ಬೆನ್ನತ್ತತೊಡಗಿತು. ಮಳೆಯ ಜೊತೆಗೆ ಕಾಫಿತೋಟವನ್ನು ಸೀಳಿಕೊಂಡು ಹೋಗಿರುವ ರಸ್ತೆ ಹಾಗೂ ಅಲ್ಲಲ್ಲಿ ಇದು ಪಕ್ಕಾ ಮಲೆನಾಡು ಎನ್ನುವಂತಹ  ತಿರುವುಗಳು,

ಮುಂದೆ ಹೋಗ್ತಾ ಹೋಗ್ತಾ ಮಳೆಯ ಆರ್ಭಟ ಹೆಚ್ಚಾಗ್ತಾ ಹೋಯ್ತು, ಜೊತೆಗೆ ಸೈಕಲ್ನ ವೇಗ ಹೆಚ್ಚಿದಂತೆ ಮಳೆಹನಿ ಮುಖಕ್ಕೆ ಬಡಿದಾಗ ಇಂಜೆಕ್ಷನ್ ಚುಚ್ಚುವಾ ಆಗೆ ನೋವಾಗುತ್ತಿತ್ತು. ತಡೆಯಲಾರದೆ ಸೈಕಲ್ ನಿಲ್ಲಿಸಿ ಕ್ಯಾಂಟೀನ್'ನಲ್ಲಿ ಬಿಸಿ ಬಿಸಿ 'ಚಾ' ಕುಡಿದಾಗ ಎಲ್ಲೋ ಸ್ವರ್ಗದಲ್ಲಿದ್ದಿನೇನೋ ಅನ್ನಿಸುವಂತಿತ್ತು. ಮಳೆಯಲ್ಲಿ ನೆನೆದು ಸುಸ್ತಾಗಿ ಒಂದು ಕಪ್ ಚಾ ಕುಡಿದ್ರೆ ಆದ್ರ ರುಚಿಯೇ ಬೇರೆ!.
 ಮಳೆ ಕಡಿಮೆಯಾಗಬಹುದೇನೋ ಎಂದು ಕಾದು ಕಾದು ಮಳೆ ಕಡಿಮೆಯಾಗುವ ಯಾವ ಲಕ್ಷಣನು ಕಾಣಿಸಲಿಲ್ಲ. ಮತ್ತೆ ಅದೇ ಮಳೆಗೆ ಸೈಕಲ್ ಏರಿ ಮೂಡಿಗೆರೆಯತ್ತ ಮುಖ ಮಾಡಿದೆ. ಪ್ರತಿಯೊಂದು ಏರನ್ನು ಕೂಡ ಇಳಿಯದೇ ಪೆಡಲ್ ತುಳಿದೆ ಹತ್ತಿಸಿದ್ದೆ. ಆದರೆ ಮೂಡಿಗೆರೆ ತಲುಪಲು 2ಕೀ.ಮಿ. ಬಾಕಿ ಇರುವಾಗ ಸುಮಾರು ಒಂದು ಕೀ. ಮಿ. ನಷ್ಟು ದೂರ ಇರುವ  ಏರೊಂದನ್ನು ಹತ್ತಿಸಲು ಪ್ರಯತ್ನಿಸಿ, ಸ್ನಾಯು ಸೆಳೆತಕ್ಕೆ ಒಳಗಾದೆ. ಒಂದು ಕ್ಷಣ ಏನು ಮಾಡಬೇಕೆಂದು ತಿಳಿಯಲಿಲ್ಲ. ಹೇಗೆ ಪ್ರಯತ್ನಿಸಿದರು ಕಾಲು ಮಾಡುಚಲು ಆಗುತ್ತಿರಲಿಲ್ಲ. ಸ್ವಲ್ಪ ಹೊತ್ತು ಅಲ್ಲೇ ನಿಂತು, ನೀರು ಕುಡಿದೇ ನಿಧಾನಕ್ಕೆ ಕಾಲು ಫ್ರೀ ಆಯಿತು. ನಂತರ ಸುಮಾರು 10:30ಗೆ ಮೂಡಿಗೆರೆ ತಲುಪಿದೆ. ಅಲ್ಲೇ ಹೋಟೆಲೊಂದರಲ್ಲಿ ತಿಂಡಿ ತಿಂದು ಕೊಟ್ಟಿಗೆಹಾರದ ಕಡೆಗೆ ಸೈಕಲ್'ನ ವೇಗವನ್ನು ಹೆಚ್ಚಿಸಿದೆ.
ಇಲ್ಲಿಂದ ಬಣಕಲ್, ಕೊಟ್ಟಿಗೆಹಾರದವರೆಗೆ ಮಳೆರಾಯ ಯಾವುದೇ ತೊಂದರೆಯನ್ನು ಕೊಡಲೇ ಇಲ್ಲ. ಸುಮಾರು 12:15ಕ್ಕೆ ಕೊಟ್ಟಿಗೆಹಾರ ತಲುಪಿದೆ. ಮತ್ತೆ ಹಸಿವಾಗತೊಡಗಿತು ಮತ್ತೆರಡು ಇಡ್ಲಿ ಬಾರಿಸಿ ಚಾರ್ಮಾಡಿಯ ಸೊಬಗನ್ನು ಸವಿಯಲು ಪಯಣವನ್ನು ಮುಂದುವರೆಸಿದೆ. ಕೊಟ್ಟಿಗೆಹಾರ ಚೆಕ್ ಪೋಸ್ಟ್ ದಾಟಿದ್ದೆ ತಡ ಮಳೆರಾಯನ ಆರ್ಭಟವೇ ಆರ್ಭಟ! ಮುಂದಕ್ಕೆ ಚಾರ್ಮಾಡಿ ಘಾಟ್ ಸೆಕ್ಷನ್ ಪ್ರಾರಂಭವಾಯಿತು.
ಮಳೆಯ ಜೊತೆಗೆ ಮಂಜು ಮುಸುಕಿದರಿಂದ ಅದ್ಯಾವುದೋ ಹೊಸ ಲೋಕದಲ್ಲಿದಲ್ಲಿರುವಂತೆ ಭಾಸವಾಯಿತು.
ಅಲ್ಲಲ್ಲಿ ಸಣ್ಣ ಸಣ್ಣ ಜಲಪಾತ ಹಾಗೂ ಅಂಕು ಡೊಂಕಿನ ಇಳಿಜಾರು ರಸ್ತೆ. ಅಬ್ಬಾ!ಸ್ವರ್ಗವನ್ನೇ ಮೀರಿಸುವ ಪ್ರಕೃತಿಯ ಸೊಬಗು.
ಈ ಭೂಮಿಯಲ್ಲಿ ಹುಟ್ಟಿದ ಮೇಲೆ  ಇದನ್ನೆಲ್ಲ ಕಣ್ತುಂಬಿಕೊಳ್ಳಲಿಲ್ಲಂದ್ರೆ ಏನು ಪ್ರಯೋಜನ ಅಲ್ವಾ!? ಚಾರ್ಮಾಡಿಯಲ್ಲಿ ಭೂ ಕುಸಿದು ಒಂದು ವಾರದ ಹಿಂದಷ್ಟೇ  ಸಂಚಾರ ಶುರುವಾದ್ದರಿಂದ, ಮಳೆಯ ಭಯಕ್ಕೋ ಗುಡ್ಡ ಕುಸಿಯಬಹುದು ಎಂಬ ಕಾರಣಕ್ಕೊ ವಾಹನಗಳ ಸಂಚಾರ ತೀರ ಕಡಿಮೆ ಇದ್ದಿತು.
ಮಳೆಯ ಆರ್ಭಟಕ್ಕೆ ಮುಂದುಗಡೆಯಿಂದ ಬರುವ ವಾಹನಗಳೇ ಕಾಣುತ್ತಿರಲಿಲ್ಲ. ಸುಮಾರು ಹದಿನೆಂಟು ಕೀ. ಮಿ. ಇಳಿಜಾರು ಇರುವುದರಿಂದ ಬ್ರೇಕ್ ಹಿಡಿದು, ಹಿಡಿದು ಕೈ ನೋವು ಶುರುವಾಯಿತು.
ಚಾರ್ಮಾಡಿ ಘಾಟ್ ಇಳಿದರೆ ಮಳೆ ಕಡಿಮೆ ಇರಬಹುದೇನೋ ಎಂದು ಭಾವಿಸಿದೆ. ಆದರೆ ಚಾರ್ಮಾಡಿ ಘಾಟ್'ಗಿಂತ ಹೆಚ್ಚಾಗಿ ಕಕ್ಕಿಂಜೆಯಲ್ಲಿ ಮಳೆ ಸುರಿಯುತ್ತಿತ್ತು.  2:15ಕ್ಕೆ ಕಕ್ಕಿಂಜೆ ತಲುಪಿದೆ. ಕಕ್ಕಿಂಜೆಯ ನಂತರ ಪಯಣ ತುಂಬಾ ಆರಾಮದಾಯಕವಾಗಿತ್ತು. 2:45ಕ್ಕೆ  ಅಣಿಯೂರು ತಲುಪಿದೆ. ಸೈಕಲ್ನ ಕ್ಯಾರಿಯರ್'ನಲ್ಲಿ ಒಂದು ಕಪ್ಪು ಬ್ಯಾಗ್, ಮಳೆಗೆ ಒದ್ದೆಯಾದ ನನ್ನನ್ನು ಪೇಟೆಯಲ್ಲಿ ಅನ್ಯಗ್ರಹದಿಂದ ಬಂದ ಜೀವಿಯನ್ನು ನೋಡಿದ ಆಗೆ ನೋಡ್ತಾ ಇದ್ರು. ಒಂದು ಕ್ಷಣ ಮುಜುಗರ ಆಗಿದ್ದಂತೂ ಸುಳ್ಳಾಲ್ಲ!.  ಮದ್ಯಾಹ್ನ 3:15ಕ್ಕೆ  ಮನೆಗೆ ತಲುಪಿದೆ.
ಕೊಟ್ಟಿಗೆಹಾರದಿಂದ ಶುರುವಾದ ಮಳೆ ಮನೆಗೆ ತಲುಪುವವರೆಗೆ ಬಿಡಲಿಲ್ಲ. ಮನೆಗೆ ತಲುಪಿದಾಗ ಅಪ್ಪ ಒಂದು ಕ್ಷಣ ಅವಾಕ್ಕದರು ಜೊತೆಗೆ ಒಂದು ಡೈಲಾಗ್ ಕೂಡ ಸೇರಿತ್ತು "ದಾನೆಂಬೆ ನಿಕ್ಕ್ ಈತ್ ಚಾರ್ಬಿ"! (ಏನು! ನಿನಗೆ ಇಷ್ಟೊಂದು ಸೊಕ್ಕು).

Comments

Post a Comment

Popular posts from this blog

ಬಂಡಾಜೆಯ ಹಾದಿ

               ===== ಬಂಡಾಜೆಯ ಹಾದಿ ===== ಮುಂಡಾಜೆ ಹಾಸ್ಟೆಲ್ನಲ್ಲಿ ಇರುವಾಗಲೇ ನನಿಗೆ ಬಂಡಾಜೆಗೊಮ್ಮೆ ಹೋಗ್ಬೇಕು ಎಂಬ ಆಸೆ ಮೂಡಿತ್ತು.(ಎಂಟು ವರ್ಷದ ಹಿಂದೆ)ಯಾಕೆಂದರೆ ಬೆಳ್ಳಿಯ ಹೊಳಪಿನಿಂದ ವಯ್ಯಾರದಿಂದ ಮೇಲಿಂದ ಜಿಗಿಯುವುದು ನಮ್ಮ ಹಾಸ್ಟೆಲ್ಗೆ ಕಾಣುವಷ್ಟು ಅಂದವಾಗಿ ಬೇರೆಲ್ಲಿಯೂ ಕಾಣಿಸೋದಿಲ್ಲ ಅನಿಸುತ್ತೆ. ಮೊನ್ನೆ ಎಕ್ಸಾಮ್ ಮುಗಿದ ಮೇಲೆ ಎಲ್ಲಿಗಾದರು ಹೋಗಬೇಕು ಎಂದು ಅನಿಸಿದಾಗಲೇ ಬಂಡಾಜೆಗೆ ಹೋಗೋಣವೆನಿಸಿತು. ಒಂದೈದು ಜನಕ್ಕೆ ಕರೆಮಾಡಿ ಕೊನೆಗೆ ಹಮೀದ್, ರಕ್ಷಿತ್ ಸಿಕ್ಕರು. ಎರಡು ಬೈಕಿನಲ್ಲಿ ಬೆಳಗ್ಗೆ 8 ಗಂಟೆಗೆನೆ ಬ್ಯಾಗ್'ಗೆ ನೀರು, ಬಿಸ್ಕೆಟ್ ಪ್ಯಾಕೇಟ್ಗಳನ್ನು ತುಂಬಿಕೊಂಡು, ನಾವು ಮೂವರು ಬಂಡಾಜೆಯ ತಣ್ಣನೆಯ ನೀರನ್ನು ಸ್ಪರ್ಶಿಸಲು ಹಾತೊರೆಯುತ್ತ ಹೊರಟೆವು. ಪಶ್ಚಿಮ ಘಟ್ಟದ ಬುಡಕ್ಕೆ ಹೋಗಿ ಬಂಡಾಜೆಯ ತುತ್ತಾ ತುದಿಗೆರಲು ಅರಣ್ಯ ಇಲಾಖೆಗೆ ಸಂಬಂಧಿಸಿದವರ ಅನುಮತಿಯನ್ನು ಪಡೆದುಕೊಂಡು ಪ್ರಶಾಂತವಾಗಿದ್ದ ಕಾಡೊಳಗೆ ಹೆಜ್ಜೆ ಹಾಕಿದೆವು. ದಾರಿ ತುಂಬಾ ತರೆಗೆಲೆ ಹರಡಿದ್ದರಿಂದ ಪ್ರತಿ ಹೆಜ್ಜೆ ಕೂಡ ಕಾಡಿನ ನಿಶಬ್ಧತೆಗೆ ಭಂಗ ತರುವಂತಿತ್ತು. ಆಗ ತಾನೇ ಮೇಲೇರುತ್ತಿದ್ದ ಸೂರ್ಯ ಕಾಡೊಳಗಿನ brightnessನ್ನು ಹೆಚ್ಚಿಸಲು ಮರಗಳ ಚಪ್ಪರದೊಂದಿಗೆ ಸೆಣಸುತ್ತ ಲಗ್ಗೆ ಇಡುತ್ತಿದ್ದ. ನಾವು ಮಾತ್ರ ಲೋಕದ ಚಿಂತೆಗಳೆಲ್ಲವನ್ನು ಬಿಟ್ಟು ಕಾಲಿ...

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.           ಅರಮನೆಯನ್ನು ನೋಡಿಕೊಳ್ಳುವವರು ನಮ್ಮನ್ನೋಡಿ ವೇಗವಾಗಿ ಧಾವಿಸಿ ನಗುಮೊಗದಿಂದಲೇ ಸ್ವಾಗತಿಸಿದರು. ಅಂದಾ ಹಾಗೆ, ಈ ನಾಲ್ನಾಡು ಅರಮನೆಯ ನಿರ್ಮಾಣದ ಕುರಿತು ಇತಿಹಾಸವನ್ನು ಹುಡುಕುತ್ತ ಹೋದರೆ, ದೊಡ್ಡವೀರ ರಾಜೇಂದ್ರರು ಶತ್ರುಗಳಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ಸೂಕ್ತ ಸ್ಥಳವನ್ನು ಹುಡುಕುತ್ತ ಬಂದಾಗ ಅವರ ಕಣ್ಣಿಗೆ ಬಿದ್ದಿದ್ದು ಈ ಬೆಟ್ಟ ಶ್ರೇಣಿಗಳಿಂದ ಹಾಗೂ ದಟ್ಟವಾದ ಕಾನನದಿಂದ ಸುತ್ತುವರೆದ ಯುವಕಪಾಡಿ ಗ್ರಾಮದಲ್ಲಿರುವ ಈ ಪ್ರದೇಶ. ಈ ಸ್ಥಳದಲ್ಲಿ 1792ರಲ್ಲಿ ಎರಡು ಅಂತಸ್ತಿನ ಸಣ್ಣ ಅರಮನೆಯನ್ನು  ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತೆ. ಅರಮನೆಯನ್ನು ನೋಡಿಕೊಳ್ಳುವವರು, ನಮ್ಮ ಊರಿನ ಬಗ್ಗೆ ಹಾಗೂ ನಮ್ಮ ಪರಿಚಯ ಮಾಡಿಕೊಳ್ಳುತ್ತಾ, ಅರಮನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅರಮನೆಯೊಳಗೆ ಹೆಜ್ಜೆ ಹಾಕಿದರು. ನಾವು ಅವರನ್ನು ಹಿಂಬಾಲಿಸುತ್ತಾ ಮುಖ್ಯ ದ್ವಾರವನ್ನು ದಾಟಿ ಅರಮನೆಯೊಳಗೆ ಹೋದಾಗ ಬಲ ಬದಿಯಲ್ಲಿ ಒಂದು ಮಂಟಪವಿದೆ. ಇವರು ಹೇಳುವ ಪ್ರಕಾರ ಇದು ದೊಡ್ಡವೀರ ರಾಜೇಂದ್ರರ ತಂಗಿಯ ವಿವಾಹ ಮಂಟಪವೆಂದು  ಹೇಳಿದರು. ಆದರೆ ನಾನು ಗೂಗಲ್ನಲ್ಲಿ ಜಾಲಾಡಿದಾಗ ದೊಡ್ಡವೀರ ರಾಜೇಂದ್ರರ ಮದುವೆ ಮಂಟಪವೆಂದು ತಿಳಿದು ಬರುತ್ತದೆ. ಈ ಮಂಟಪಕ್ಕೆ ನಾಲ್ಕು ಪ್ರವೇಶ ದ್ವಾರಗಳಿದ್ದು ಮೇಲ್ಬಾಗದಲ್ಲಿ ನಾಲ್ಕು ದಿಕ್ಕಿಗ...

ಬಿರ್ಲಾ ದೇವಸ್ಥಾನ ಕೋಲ್ಕತಾ.

  ಬೆಳಗ್ಗೆನೇ ನಿತ್ಯ ದಿನಚರಿಗಳನ್ನು ಮುಗಿಸಿ, ಕ್ಯಾಮೆರಾ ಬ್ಯಾಗ್ ಎತ್ತಿಕೊಂಡು ಕಂಟೋನ್ಮೆಂಟ್ ನಿಂದ ಹೊರಗೆ ಬಂದೆ. ಅಲ್ಲಿಂದ ಸೀದಾ ಬಂದವ ಪ್ರತಿ ರಜೆಯ ದಿನ ಚಾ ಕುಡಿವ ಸ್ಥಳಕ್ಕೆ ಬಂದು, ಒಂದು ಚಹಾದ ಜೊತೆಗೆ ಹೂಗ್ಲಿ ನದಿಯ ಹರಿವನ್ನು ನೋಡುತ್ತಾ  ಇವತ್ತು  ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಾ ಗೂಗಲ್ ಮಾಡಿದಾಗ ಮೊದಲೇ Note ಮಾಡಿಟ್ಟುಕೊಂಡಿದ್ದ ಬಿರ್ಲಾ ಮಂದಿರ ಕಾಣಿಸಿತು. ನಾನಿದ್ದ ಸ್ಥಳದಿಂದ ನಡೆದುಕೊಂಡು ಹೋಗಲು ಎಷ್ಟು ಕಿಮೀ ಇದೆ ಎಂದು ಹುಡುಕಿದಾಗ 8 ಕಿಮೀ ತೋರಿಸಿತು. ಅಲ್ಲಿಂದ ಸೀದಾ ವೇಗವಾಗಿ ಹೆಜ್ಜೆ ಯ ಮೇಲೊಂದು ಹೆಜ್ಜೆ  ಹಾಕುತ್ತಾ ಹೊರಟೆ. ಯಾಕಂದ್ರೆ 11ಕ್ಕೆ ದೇವಸ್ಥಾನ ಕ್ಲೋಸ್ ಆಗುತ್ತೆ ಎನ್ನುವ ಮಾಹಿತಿ ಕೂಡ ಗೂಗಲ್ ನಲ್ಲಿ ತೋರಿಸ್ತಾ ಇತ್ತು. ಇನ್ನು ನನ್ಯಾವತ್ತು ಸುತ್ತಾಡಲು ಪ್ರಾಥಮಿಕವಾಗಿ ಆಯ್ಕೆ ಮಾಡುವ ಸ್ಥಳ ಯಾವುದೆಂದರೆ, ನಮಗೆ ನಡೆದುಕೊಂಡು ಹೋಗಲು ಸಾಧ್ಯವಿರುವಂತಹ ಸ್ಥಳಗಳು, ಯಾಕಂದ್ರೆ ನಡೆದುಕೊಂಡು ಹೋಗುವಾಗ ನಮಗೆ ಬೇಕಾದ ಹಾಗೆ ಫೋಟೋವನ್ನು ಸೆರೆ ಹಿಡಿಯಬಹುದು ಹಾಗೂ ಏಕಾಂಗಿಯಾಗಿ ನಡೆದುಕೊಂಡು ಹೋಗುವ ಒಂದು ಮಜನೆ ಇದ್ಯಾಲ್ವ ಅದೊಂದು ನಶೆನೆ ಬೇರೆ ಮರ್ರೆ. ಅಂತೂ 10 ಗಂಟೆ ಆಗುವಷ್ಟರಲ್ಲಿ ಬಿರ್ಲಾ ಮಂದಿರಕ್ಕೆ ತಲುಪಿದೆ. ಮೊದಲನೆಯದಾಗಿ ಅಲ್ಲಿನ ಸಿಬ್ಬಂದಿ ನಗು ಮೊಗದೊಂದಿಗೆ ಸ್ವಾಗತಿಸಿದರೆ ಎರಡನೆಯದಾಗಿ ಇಲ್ಲಿ "ಯಾವುದೇ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯಲು ಅವಕಾಶ ಇಲ್ಲ" ಎಂದರು. ಇನ್ನು...